ADVERTISEMENT

ಮೇಲ್ಸೇತುವೆಯಿಂದ ಬಿದ್ದು ಮೃತಪಟ್ಟ ವ್ಯಕ್ತಿಗೆ ಕೊರೊನಾ

ಸಹಾಯಕ್ಕೆ ಹೋಗಿದ್ದ ಜನ, ಚಿಕಿತ್ಸೆ ನೀಡಿದ್ದ ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 9:36 IST
Last Updated 11 ಜೂನ್ 2020, 9:36 IST

ಬೆಂಗಳೂರು: ನಗರದ ನಾಗರಬಾವಿ ವೃತ್ತದ ಮೇಲ್ಸೇತುವೆಯಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರಿಗೆ ಕೊರೊನಾ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

’40 ವರ್ಷದ ವ್ಯಕ್ತಿ ಇದೇ ಜೂನ್ 8ರಂದು ಮೇಲ್ಸೇತುವೆಯಿಂದ ರಸ್ತೆಗೆ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡು ನರಳುತ್ತಿದ್ದ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆಸ್ಪತ್ರೆಯೊಂದರ ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು’ ಎಂದು ಚಂದ್ರಾಲೇಔಟ್ ಪೊಲೀಸರು ಹೇಳಿದರು.

‘ಚಿಕಿತ್ಸೆಗೆ ಸ್ಪಂದಿಸದೇ ವ್ಯಕ್ತಿ ಅಸುನೀಗಿದ್ದರು. ಆರೋಗ್ಯ ಇಲಾಖೆ ನಿಯಮದಂತೆ ವ್ಯಕ್ತಿಯ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದೀಗ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದೆ’ ಎಂದೂ ತಿಳಿಸಿದರು.

ADVERTISEMENT

‘ವ್ಯಕ್ತಿಯ ಹೆಸರು ಹಾಗೂ ವಿಳಾಸ ಗೊತ್ತಾಗಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ. ಮೃತನ ಫೋಟೊವನ್ನು ನಗರದ ಹಾಗೂ ಹೊರ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ. ಗುರುತು ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ದೊರೆಯಲಿದೆ’ ಎಂದೂ ಪೊಲೀಸರು ತಿಳಿಸಿದರು.

ಜನ, ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕ: ರಸ್ತೆ ಮೇಲೆ ವ್ಯಕ್ತಿ ಬಿದ್ದಿದ್ದನ್ನು ಕಂಡು ಜನರು ಸಹಾಯಕ್ಕೆ ಹೋಗಿದ್ದರು. ಅವರೇ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲು ನೆರವಾಗಿದ್ದರು. ವ್ಯಕ್ತಿಯನ್ನು ಬದುಕಿಸಲು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯೂ ಚಿಕಿತ್ಸೆ ನೀಡಿದ್ದರು. ಇದೀಗ ಅವರೆಲ್ಲರನ್ನೂ ಆತಂಕ ಶುರುವಾಗಿದೆ.

‘ವ್ಯಕ್ತಿ ಮೃತಪಟ್ಟ ಸ್ಥಳದಲ್ಲಿ ಹಲವರು ಓಡಾಡಿದ್ದರು. ಅವರೆಲ್ಲರೂ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಇಬ್ಬರು ಪೊಲೀಸರು ದ್ವಿತೀಯ ಸಂಪರ್ಕದಲ್ಲಿದ್ದಾರೆ. ಕೊರೊನಾ ಇರುವುದು ದೃಢಪಟ್ಟಿದ್ದರಿಂದ ಘಟನೆ ಬಗ್ಗೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.