ADVERTISEMENT

700ರ ಗಡಿಯತ್ತ ಕೋವಿಡ್

ಒಂದೇ ದಿನ 42 ಮಂದಿಗೆ ಸೋಂಕು ದೃಢ * ಮೃತರ ಸಂಖ್ಯೆ 32ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 20:02 IST
Last Updated 14 ಜೂನ್ 2020, 20:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿಗೆ ನಗರದಲ್ಲಿ ಮತ್ತೆ ಮೂವರು ಮೃತಪಟ್ಟಿದ್ದು, ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿದೆ. ಹೊಸದಾಗಿ 42 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 690ಕ್ಕೆ ತಲುಪಿದೆ.

ಒಂದು ವಾರದಲ್ಲೇ 215 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಭಾನುವಾರ ವರದಿಯಾದ ಪ್ರಕರಣಗಳಲ್ಲೂ 16 ಮಂದಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. 9 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯದಿಂದ (ಐಎಲ್‌ಐ) ಬಳಲುತ್ತಿದ್ದಾರೆ. ಇಬ್ಬರು ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ವರು ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು ಭಟ್ಟರಹಳ್ಳಿಯ 39 ವರ್ಷದ ಮಹಿಳೆ ಡಯಾಲಿಸಿಸ್ ಸಂಬಂಧ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದ ಮೂವರನ್ನು ಪತ್ತೆ ಮಾಡಿ, ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವಸಂತಪುರದ 36 ವರ್ಷದ ಪುರುಷ ಕೆಲ ದಿನಗಳ ಹಿಂದೆ ಮೈಸೂರಿಗೆ ಪ್ರಯಾಣ ಮಾಡಿ ವಾಪಸ್ ಆಗಿದ್ದರು. ಬಳಿಕ ಕೆಮ್ಮು ಹಾಗೂ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ, ತಪಾಸಣೆ ಮಾಡಿಸಿಕೊಂಡಿದ್ದರು. ಈ ವೇಳೆ ಅವರಿಗೆ ಕೋವಿಡ್ ಪರೀಕ್ಷೆಯನ್ನೂ ಮಾಡಲಾಗಿತ್ತು. ಅವರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ ತಲಾ 8 ಮಂದಿಯನ್ನು ಗುರುತಿಸಲಾಗಿದೆ.

ADVERTISEMENT

ಮುಂಬೈನಿಂದ ಮರಳಿದ್ದ ಬೊಮ್ಮನಹಳ್ಳಿಯ 41 ವರ್ಷದ ವ್ಯಕ್ತಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದರು. ಅವರನ್ನು ಮನೆಗೆ ಕಳುಹಿಸುವ ಮೊದಲು ನಡೆಸಿದ ಕೋವಿಡ್ ಪರೀಕ್ಷೆ ನಡೆದಿತ್ತು. ನಗರಕ್ಕೆ ಬಂದಿದ್ದ ಪಶ್ಚಿಮ ಬಂಗಾಳದ 21 ವರ್ಷದ ಯುವಕ ಅತಿಥಿಗೃಹದಲ್ಲಿ ವಾಸವಿದ್ದರು. ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಐವರಿಗೆ ಹರಡಿದ ಸೋಂಕು:ಆನೇಕಲ್‌ನ ಹೆನ್ನಾಗರ ಗ್ರಾಮದ 32 ವರ್ಷದ ಮಹಿಳೆ ಜೂ.11ರಂದು ಸೋಂಕಿತರಾಗಿದ್ದರು. ಈಗ ಅವರ ಸಂಪರ್ಕದಲ್ಲಿದ್ದವರಲ್ಲಿ 12 ಹಾಗೂ 13 ವರ್ಷದ ಬಾಲಕರು ಸೇರಿದಂತೆ ಐವರು ಸೋಂಕಿತರಾಗಿದ್ದಾರೆ. ಸಂಪರ್ಕ ಹೊಂದಿದ್ದ 65 ವರ್ಷದ ವೃದ್ಧನನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಶ್ರೂಷಕಿ ಕೆಲ ದಿನಗಳ ಹಿಂದೆ ಸೋಂಕಿತರಾಗಿದ್ದರು. ಅವರು ಅಂಜನಪ್ಪ ಗಾರ್ಡನ್‌ನ ನಿವಾಸಿಯಾಗಿದ್ದು, ಈಗ ಅವರ 11 ವರ್ಷದ ಪುತ್ರಿಗೂ ಕಾಯಿಲೆ ಬಂದಿದೆ. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ 40 ವರ್ಷದ ವ್ಯಕ್ತಿ ಕೋವಿಡ್ ಪೀಡಿತರಾಗಿದ್ದಾರೆ. ಅವರು ಕೆಲ ದಿನಗಳ ಹಿಂದೆ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲು ತಮಿಳುನಾಡಿಗೆ ಹೋಗಿ ಬಂದಿದ್ದರು. ಅವರ ಪತ್ನಿ ಹಾಗೂ ಮನೆ ಕೆಲಸದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.