ADVERTISEMENT

'108' ಆಂಬುಲೆನ್ಸ್‌ ಸಿಬ್ಬಂದಿಗೆ 3 ತಿಂಗಳಿಂದ ವೇತನವಿಲ್ಲ

ಗುರು ಪಿ.ಎಸ್‌
Published 30 ಮೇ 2021, 21:10 IST
Last Updated 30 ಮೇ 2021, 21:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಅಲ್ಲದೆ, ಇತರೆ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಆಂಬುಲೆನ್ಸ್‌ ಸೇವೆ ಒದಗಿಸುತ್ತಿರುವ, ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನವನ್ನೇ ನೀಡಿಲ್ಲ.

’ತಿಂಗಳಿಗೆ ಕೇವಲ ₹14,500 ಸಂಬಳಕ್ಕೆ ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾದ ನಂತರ ವಿಪರೀತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಮೂರು ತಿಂಗಳಿನಿಂದ ವೇತನವಿಲ್ಲದೆ ತೀವ್ರ ಕಷ್ಟವಾಗಿದೆ‘ ಎಂದು ಹೆಸರು ಬಹಿರಂಗಪಡಿಸಲು ಬಯಸದ ಚಾಲಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

’ಫೆಬ್ರುವರಿ ತಿಂಗಳ ವೇತನವನ್ನು ಮೇ 26ಕ್ಕೆ ಪಾವತಿಸಿದ್ದಾರೆ. ಮಾರ್ಚ್‌, ಏಪ್ರಿಲ್‌ ತಿಂಗಳ ವೇತನ ಇದುವರೆಗೂ ಬಂದಿಲ್ಲ‘ ಎಂದು ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಚಂದ್ರು ಪುಣ್ಯಕೋಟಿ ಹೇಳಿದರು.

ADVERTISEMENT

’ಈಗ ಹೆಚ್ಚಾಗಿ ಕೋವಿಡ್‌ ರೋಗಿಗಳನ್ನೇ ನಾವು ಕರೆದೊಯ್ಯಬೇಕಾಗಿದೆ. ಆದರೆ, ಸಕಾಲಕ್ಕೆ ಮಾಸ್ಕ್‌, ಗ್ಲೌಸ್‌, ಸ್ಯಾನಿಟೈಸರ್‌ಗಳನ್ನೂ ನಮಗೆ ಪೂರೈಸುತ್ತಿಲ್ಲ‘ ಎಂದು ಚಾಲಕರೊಬ್ಬರು ದೂರಿದರು.

’ಆಂಬುಲೆನ್ಸ್‌ನಲ್ಲಿ ರೋಗಿಯನ್ನು ಕರೆದೊಯ್ದು, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ) ಅವರನ್ನು ತೋರಿಸಿದ ನಂತರವೇ ಗ್ಲೌಸ್‌ ಮತ್ತು ಮಾಸ್ಕ್‌, ಅಗತ್ಯವಿದ್ದರೆ ಪಿಪಿಇ ಕಿಟ್‌ ಕೊಡುತ್ತಾರೆ. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ರೋಗಿಯ ಮನೆಯಿಂದ ಪಿಎಚ್‌ಸಿವರೆಗೆ ಕರೆದೊಯ್ಯುವ ಸಂದರ್ಭದಲ್ಲಿಯೇ ಸೋಂಕು ತಗುಲಿದರೆ ಯಾರು ಜವಾಬ್ದಾರಿ’ ಎಂದು ಮತ್ತೊಬ್ಬ ಚಾಲಕ ಪ್ರಶ್ನಿಸಿದರು.

’ಕೆಲಸವೇ ಹೆಚ್ಚಾಗಿರುವುದರಿಂದ ಕುಟುಂಬದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ವೇತನ ನೀಡಿದರೆ ಮನೆಯವರಾದರೂ ಕುಟುಂಬ ನಿರ್ವಹಣೆ ನೋಡಿಕೊಳ್ಳುತ್ತಾರೆ. ಕೈಯಲ್ಲಿ ಹಣವಿಲ್ಲದೆ ಜೀವನ ನಿರ್ವಹಿಸುವುದೂ ಕಷ್ಟವಾಗಿದೆ. ಎರಡು ವರ್ಷದ ಹಿಂಬಾಕಿ ಮೊತ್ತವನ್ನೂ ಇದುವರೆಗೆ ಪಾವತಿಸಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಚಾಲಕರೊಬ್ಬರು ಕಣ್ಣೀರು ಹಾಕಿದರು.

’ತೀರಾ ತುರ್ತು ಸಂದರ್ಭದಲ್ಲಿಯೇ ನಮಗೆ ಕರೆ ಬರುತ್ತವೆ. ಹೆಚ್ಚು ಹೊತ್ತು ಪ್ರಯತ್ನಿಸಿದಾಗಲೂ ಸಂಪರ್ಕ ಸಿಗದಿದ್ದಾಗ ಜನ ರೇಗುತ್ತಾರೆ. ಹಾಸಿಗೆ ಸಿಗದಿದ್ದರೂ ನಮ್ಮ ಮೇಲೆಯೇ ಕೋಪ ಪ್ರದರ್ಶಿಸುತ್ತಾರೆ. ಇದಕ್ಕೆಲ್ಲ ಸಮಾಧಾನದಿಂದ ಉತ್ತರಿಸಬೇಕು ಎಂದರೆ ಮಾನಸಿಕವಾಗಿ ನಾವೂ ಗಟ್ಟಿಯಾಗಿರಬೇಕಾಗುತ್ತದೆ. ಆದರೆ, ವೇತನವಿಲ್ಲದಿದ್ದರೆ ಕುಟುಂಬದ ಚಿಂತೆಯೂ ನಮ್ಮನ್ನು ಕಾಡುವುದರಿಂದ ಹೆಚ್ಚು ಒತ್ತಡ ಅನುಭವಿಸುತ್ತಿದ್ದೇವೆ‘ ಎಂದು 108 ಸಹಾಯವಾಣಿ ಸಿಬ್ಬಂದಿಯೊಬ್ಬರು ಹೇಳಿದರು.

3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯು ಜಿವಿಕೆ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಮತ್ತು ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಮೂಲಕ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.