ADVERTISEMENT

ವಾರಾಂತ್ಯದ ಸಂಭ್ರಮ ಕಸಿದ ಕೊರೊನಾ

ಸೋಂಕು ಪೀಡಿತ ಐವರಿಗೆ ಮುಂದುವರಿದ ಚಿಕಿತ್ಸೆ l ಅಗತ್ಯ ಸುರಕ್ಷತಾ ಕ್ರಮ: ಸಚಿವ ಡಾ.ಕೆ.ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:38 IST
Last Updated 14 ಮಾರ್ಚ್ 2020, 22:38 IST
ಕೋರಮಂಗಲದ ಪೋರಂ ಮಾಲ್‌ ಬಂದ್‌ ಮಾಡಲಾಗಿದ್ದು, ಸಾರ್ವಜನಿಕರು ಮಾಹಿತಿಗಾಗಿಫಲಕ –ಪ್ರಜಾವಾಣಿ 
ಕೋರಮಂಗಲದ ಪೋರಂ ಮಾಲ್‌ ಬಂದ್‌ ಮಾಡಲಾಗಿದ್ದು, ಸಾರ್ವಜನಿಕರು ಮಾಹಿತಿಗಾಗಿಫಲಕ –ಪ್ರಜಾವಾಣಿ    

ಬೆಂಗಳೂರು: ವಾರಾಂತ್ಯದಲ್ಲಿ ಶಾಪಿಂಗ್‌ ಮಾಲ್‌ಗಳು, ಚಿತ್ರಮಂದಿರ, ಹೋಟೆಲ್‌ಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಜಮಾಯಿಸಿ ಸಂಭ್ರಮಿಸುತ್ತಿದ್ದ ನಗರದ ಜನತೆ, ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಶನಿವಾರ ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕಿದರು. ಇದರಿಂದಾಗಿ, ವಾರಾಂತ್ಯದ ಸಂಭ್ರಮಕ್ಕೆ ಸೋಂಕಿನ ಭೀತಿಯ ಕಾರ್ಮೋಡ ಕವಿದಿತ್ತು.

ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಬಾರದು ಎಂಬ ಸರ್ಕಾರದ ಆದೇಶದ ಹಿನ್ನೆಲೆ ವಿವಿಧ ಕಾರ್ಯಕ್ರಮಗಳು ರದ್ದಾದವು. ಇದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತು, ರವೀಂದ್ರ ಕಲಾಕ್ಷೇತ್ರ ಸೇರಿ
ದಂತೆ ವಿವಿಧ ಕೇಂದ್ರಗಳಿಗೆ ಬೀಗ ಹಾಕಲಾಗಿತ್ತು. ಹೋಟೆಲ್‌ಗಳಲ್ಲೂ ಗ್ರಾಹಕರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿತ್ತು. ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ (ಆರ್‌ಜಿಐಸಿಡಿ), ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಬೌರಿಂಗ್‌ ಆಸ್ಪತ್ರೆ,ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಏರಿಕೆಯಾಗಿತ್ತು.

150 ಹಾಸಿಗೆಗಳು:ಕೊರೊನಾ ಸೋಂಕು ಶಂಕಿತರು ಹಾಗೂ ರೋಗಿಗಳಿಗಾಗಿ ನಗರದ ಆಕಾಶ್ ವೈದ್ಯಕೀಯ ವಿಜ್ಞಾನ ಸಂಸ್ಥೆ 150 ಹಾಸಿಗೆಗಳನ್ನು ಸಿದ್ಧಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಹಾಗೂ ಜಂಟಿ ನಿರ್ದೇಶಕ ಡಾ.ಬಿ.ಜಿ. ಪ್ರಕಾಶ್‌ ಕುಮಾರ್ ಅವರನ್ನು ಒಳಗೊಂಡ ಅಧಿಕಾರಿಗಳ ತಂಡವು ಸಂಸ್ಥೆ ಹಾಗೂ ಅದಕ್ಕೆ ಹೊಂದಿ
ಕೊಂಡಿರುವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಸಂಸ್ಥೆ 15 ಕಿ.ಮೀ. ದೂರದಲ್ಲಿದ್ದು, ಅರ್ಧಗಂಟೆಯಲ್ಲಿ ತಲುಪಬಹುದು. ರೋಗಿಗಳಿಗೆ ಚಿಕಿತ್ಸೆ ನೀಡಲು 100 ತಜ್ಞ ವೈದ್ಯರಿದ್ದಾರೆ.

ADVERTISEMENT

‘10 ತೀವ್ರ ನಿಗಾ ಘಟಕವನ್ನು (ಐಸಿಯು) ಸಿದ್ಧಗೊಳಿಸಲಾಗಿದೆ. ಮಕ್ಕಳು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌
ಗಳಿದ್ದು, ವಾರ್ಡ್‌ಗಳಲ್ಲಿ ತಲಾ 30 ಹಾಸಿಗೆಗಳಿವೆ. ಗರ್ಭಿಣಿಯರಿಗೆ ಕೂಡ ಪ್ರತ್ಯೇಕ ವಾರ್ಡ್‌ ಸಿದ್ಧಗೊಳಿಸಿದ್ದು, ಅದರಲ್ಲೂ 30 ಹಾಸಿಗೆಗಳಿವೆ. ಇದರ ಹೊರತಾಗಿ 7ರಿಂದ 8 ಪ್ರತ್ಯೇಕ ನಿಗಾ ಕೇಂದ್ರಗಳಿದ್ದು, ಸೋಂಕು ದೃಢಪಟ್ಟವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುವುದು’ ಎಂದುಸಂಸ್ಥೆಯಉಪ ವೈದ್ಯಕೀಯ ಅಧೀಕ್ಷಕ ಡಾ.ಕೆ. ಬ್ರಿಜೇಶ್ ತಿಳಿಸಿದರು.

ತೀವ್ರವಾದ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ದಿನಕ್ಕೆ ₹1,800 ಹಾಗೂ ಐಸಿಯುದಲ್ಲಿ ಚಿಕಿತ್ಸೆ ಪಡೆಯುವ ರೋಗಿಗೆ ₹ 4,500ವೆಚ್ಚ ಭರಿಸಲಾಗುತ್ತದೆ. ವಾರದ ಎಲ್ಲ ದಿನಗಳಲ್ಲೂ 24 ಗಂಟೆ
ಗಳು ಸೇವೆಯನ್ನು ಒದಗಿಸಲಾಗುತ್ತದೆ.

ಆತಂಕ: ತಪಾಸಣೆಗೆ ಒಲವು
ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಭೀತಿ ಹೆಚ್ಚುತ್ತಿದ್ದು, ಸಾಮಾನ್ಯ ಅನಾರೋಗ್ಯದ ಸಮಸ್ಯೆಗೂ ಜನತೆ ಆಸ್ಪತ್ರೆಗಳಿಗೆ ತೆರಳಿ, ರಕ್ತ ಹಾಗೂ ಗಂಟಲಿನ ದ್ರವದ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.

‘ನಮ್ಮವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇಲ್ಲಿನ ವಾತಾವರಣದಲ್ಲಿ ಸುಲಭವಾಗಿ ಸೋಂಕು ಹರಡುವುದಿಲ್ಲ.ಆಸ್ತಮಾ, ಮಧುಮೇಹ ಮತ್ತು ಹೃದ್ರೋಗ ಮುಂತಾದ ಕಾಯಿಲೆ ಸಾಧ್ಯತೆ ಹೆಚ್ಚಿರುವ ವಯಸ್ಸಾದ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿನ ಪರಿಣಾಮ ಅವರ ಮೇಲಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಎಲ್ಲ ವಯೋಮಾನದವರು ಆರೋಗ್ಯಕರ ಆಹಾರ ಸೇವಿಸಬೇಕು. ಶುಚಿತ್ವ ಅನುಸರಿಸಲೇಬೇಕು’ ಎಂದುಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯಾಧಿಕಾರಿಡಾ.ಅನ್ಸಾರ್ ಅಹಮದ್ ತಿಳಿಸಿದರು.

‘ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಬಳಸುವುದು ಒಳಿತು. ಇಲ್ಲಿನ ಶೇ 99ರಷ್ಟು ಮಂದಿ ಸೋಂಕಿಗೆ ಸಾಯುವುದಿಲ್ಲ. ಕಚೇರಿಯಿಂದ ಅಥವಾ ಹೊರಗಡೆಯಿಂದ ಮನೆಗೆ ಬಂದಾಗ ಬಟ್ಟೆಯನ್ನು ತೊಳೆದು, ಬಿಸಿ ನೀರಿನ ಸ್ನಾನ ಮಾಡಬೇಕು’ ಎಂದರು.

ಟೆಕಿ ಜತೆಗೆ ಬಂದಿದ್ದ ಪತ್ನಿ
ಕೊರೊನಾ ಸೋಂಕುಪೀಡಿತ 26 ವರ್ಷದ ಟೆಕಿಯ (ಗೂಗಲ್ ಉದ್ಯೋಗಿ) ಜತೆಗೆ ಪತ್ನಿಯೂ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಆಗ್ರಾಕ್ಕೆ ತೆರಳಿದ್ದ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ಗ್ರೀಸ್‌ಗೆ ಹನಿಮೂನ್‌ಗೆ ಹೋಗಿದ್ದ ದಂಪತಿಮಾ.6ಕ್ಕೆ ಮುಂಬೈಗೆ ಬಂದಿದ್ದರು. ಮಾ.8ರಂದು ರಾತ್ರಿ8.45ಕ್ಕೆ ಇಂಡಿಗೋ ವಿಮಾನದಲ್ಲಿ ಹೊರಟ ಅವರು, ರಾತ್ರಿ 11.45ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಪತ್ನಿ ಅಲ್ಲಿಂದಲೇ ಮಧ್ಯರಾತ್ರಿ ದೆಹಲಿಗೆ ತೆರಳಿದ್ದರು. ಅಲ್ಲಿಂದ ರೈಲಿನ ಮೂಲಕ ಆಗ್ರಾಕ್ಕೆ ಹೋಗಿದ್ದರು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಪೂರ್ಣ ತನಿಖೆ ಮಾಡಿದ ಬಳಿಕ ಈ ಮಾಹಿತಿ ದೊರೆತಿದೆ. ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪ್ರವಾಸೋದ್ಯಮ ತಾಣಗಳು ಹಾಗೂ ಮೃಗಾಲಯವನ್ನು ಮುಚ್ಚಲು ಕ್ರಮವನ್ನು ಕೈಗೊಳ್ಳಲಾಗಿದೆ. ಹೊಸದಾಗಿ ಯಾರಿಗೂ ಸೋಂಕು ತಗುಲಿಲ್ಲ. ಸೋಂಕಿತರಿಗೆ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮೀಸಲಿಡುವ ಸಂಬಂಧ ಈಗಾಗಲೇ ಮೂರು ಆಸ್ಪತ್ರೆಗಳನ್ನು ವೀಕ್ಷಿಸಿದ್ದೇನೆ. ಸೋಮವಾರ ಅಂತಿಮಗೊಳಿಸಲಾಗುವುದು’ ಎಂದರು.

ಇನ್ಫೊಸಿಸ್‌ ಉಪಕಚೇರಿಗೆ ಬೀಗ
ಎಲೆಕ್ಟ್ರಾನಿಕ್‌ ಸಿಟಿಯ ಐಐಪಿಎಂ ಕಟ್ಟಡದಲ್ಲಿರುವ ಇನ್ಫೊಸಿಸ್‌ ಉಪಕಚೇರಿಯ ಉದ್ಯೋಗಿಯೊಬ್ಬರಲ್ಲಿ ಸೋಂಕು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಚೇರಿನ್ನು ಸ್ಚಚ್ಛಗೊಳಿಸಲಾಗುತ್ತಿದ್ದು, ಉದ್ಯೋಗಿಗಳಿಗೆ ಮನೆಯಲ್ಲಿಯೇ ಕೆಲಸ ಮಾಡಲು ಕಂಪನಿ ಸೂಚಿಸಿದೆ. ಕಂಪನಿಯ ಪ್ರತಿನಿಧಿ ಗುರುರಾಜ್ ದೇಶಪಾಂಡೆ ಪ್ರತಿಕ್ರಿಯಿಸಿ, ‘ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡವನ್ನು ಸದ್ಯ ಖಾಲಿ ಮಾಡಿಸಲಾಗಿದೆ. ಯಾವುದೇ ಆತಂಕವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸ್ಥಿತಿ ಸ್ಥಿರ
ಸೋಂಕಿಗೊಳಗಾದ ಐದು ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಹೊಸ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಸೋಂಕು ಶಂಕೆ ಹಿನ್ನೆಲೆಯಲ್ಲಿ ಹೊಸದಾಗಿ 11 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸೋಂಕಿನ ಅನುಮಾನವಿರುವುದರಿಂದ ಮೂವರನ್ನು ಬೆಂಗಳೂರಿನ ರಾಜೀವ್‍ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದೆ ದಾಖಲಾಗಿದ್ದ ಮೂವರನ್ನು ಬಿಡುಗಡೆ ಮಾಡಲಾಗಿದೆ. ಹಾಸನದಲ್ಲಿ ನಾಲ್ವರು, ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ತಲಾ ಒಬ್ಬರು ಹಾಗೂ ಬೀದರ್‌ನಲ್ಲಿ ಇಬ್ಬರನ್ನು ಸೋಂಕು ಶಂಕೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 75,730, ಮಂಗಳೂರು ವಿಮಾನ ನಿಲ್ದಾಣದಲ್ಲಿ 27,963 ಹಾಗೂ ಬಂದರುಗಳಲ್ಲಿ 5,439 ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಲಾಗಿದೆ.

ಅಂಕಿ–ಅಂಶಗಳು
72 ಸಾವಿರ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಟ್ಟವರು
19 ಸಾವಿರ:ಆರೋಗ್ಯ ಸಹಾಯವಾಣಿಗೆ 104ಕ್ಕೆ ದೂರವಾಣಿ ಕರೆ ಮಾಡಿದವರು
302:28 ದಿನಗಳ ನಿಗಾ ಅವಧಿಯನ್ನು ಪೂರ್ಣಗೊಳಿಸಿದವರು
639:ಪರೀಕ್ಷೆ ಮಾಡಲು ಸಂಗ್ರಹವಾದ ಒಟ್ಟು ಮಾದರಿಗಳು
540: ಪರೀಕ್ಷಾ ವರದಿಯಿಂದಸೋಂಕು ತಗುಲಿಲ್ಲ ಎಂದು ದೃಢಪಡಿಸಿಕೊಂಡವರು
1,012:ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಿಸಲ್ಪಟ್ಟವರು
32:ಆಸ್ಪತ್ರೆಗಳಲ್ಲಿಪ್ರತ್ಯೇಕವಾಗಿ ಇರಿಸಲ್ಪಟ್ಟವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.