ADVERTISEMENT

ಕೊರೊನಾ ಭೀತಿ: ವಹಿವಾಟು ಮಂದಗತಿ

ಸಮೂಹ ಸಾರಿಗೆ ಬಳಸಲು ಜನರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 21 ಮೇ 2020, 5:48 IST
Last Updated 21 ಮೇ 2020, 5:48 IST
ಸಲೂನ್‌ನಲ್ಲಿ ಚಟುವಟಿಕೆ ಆರಂಭವಾಗಿದೆ –ಪ್ರಜಾವಾಣಿ ಚಿತ್ರ
ಸಲೂನ್‌ನಲ್ಲಿ ಚಟುವಟಿಕೆ ಆರಂಭವಾಗಿದೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಲಾಕ್‌ಡೌನ್ ಸಡಿಲಗೊಂಡರೂಕೊರೊನಾ ಸೋಂಕಿನ ಗುಂಗಿನಲ್ಲಿರುವ ಜನಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ.ನಗರದಲ್ಲಿವಾಣಿಜ್ಯ ವಹಿವಾಟು ಅಷ್ಟೇನೂ ಚುರುಕು ಪಡೆದಿಲ್ಲ. ಆದರೆ, ಮಂಗಳವಾರಕ್ಕಿಂತ ಬುಧವಾರ ಕೊಂಚ ಚೇತರಿಕೆ ಕಂಡಿದೆ.

ಆಟೋರಿಕ್ಷಾ, ಟ್ಯಾಕ್ಸಿಗಳು ರಸ್ತೆಗೆ ಇಳಿದಿದ್ದರೂ, ಹತ್ತಲು ಜನ ಭಯಪಡುತ್ತಿದ್ದಾರೆ.ಆಟೋರಿಕ್ಷಾದಲ್ಲಿ ಇಬ್ಬರಿಗೆ ಮತ್ತು ಟ್ಯಾಕ್ಸಿಗಳಲ್ಲಿ ಮೂವರ ಪ್ರಯಾಣಕ್ಕೆ ಮಾತ್ರ ಅವಕಾಶ ಇದೆ. ಆದರೂ, ಸಮೂಹ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ.

‘ದಿನವಿಡೀ ಆಟೋರಿಕ್ಷಾ ಸುತ್ತಾಡಿಸಿದರೂ ₹100 ಸಂಪಾದನೆ ಆಗಿಲ್ಲ. ಕೊರೊನಾ ಸೋಂಕಿಗೆ ಜನ ಹೆದರಿ ಹೋಗಿದ್ದಾರೆ. ನಮ್ಮ ಕುಟುಂಬದವರ ಹೊಟ್ಟೆ ತುಂಬಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಆಟೊ ಚಾಲಕ ಉಮೇಶ್ ಅಳಲು ತೋಡಿಕೊಂಡರು.

ADVERTISEMENT

ದಿನಸಿ ಅಂಗಡಿಗಳಲ್ಲಿ ಎಂದಿನಂತೆ ಜನ ಇದ್ದರೆ, ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್ ಸಲಕರಣೆ ಅಂಗಡಿಗಳು, ಹಾರ್ಡ್‌ವೇರ್‌ಗಳು, ಮೊಬೈಲ್ ಅಂಗಡಿಗಳು, ಬ್ಯಾಂಗಲ್ಸ್ ಸ್ಟೋರ್‌ಗಳು, ಗಿಫ್ಟ್ ಸೆಂಟರ್‌ಗಳು ಖಾಲಿ ಖಾಲಿ ಇದ್ದವು.

‘ಸೋಂಕು ಹರಡುವುದು ನಿಂತಿಲ್ಲ. ಹೀಗಾಗಿ, ಅಂಗಡಿ ಮುಂಗಟ್ಟುಗಳಿಗೆ ಬರಲು ಜನ ಹೆದರುತ್ತಿದ್ದಾರೆ’ ಎಂದು ಬ್ಯಾಂಗಲ್ಸ್ ಸ್ಟೋರ್ ನಡೆಸುತ್ತಿರುವ ಪ್ರೇಮಾ ಹೇಳಿದರು.

‘ಎಪಿಎಂಸಿ ಮಾರುಕಟ್ಟೆಯಲ್ಲೂ ಬುಧವಾರದ ವಹಿವಾಟು ಚುರುಕು ಕಾಣಿಸಲಿಲ್ಲ’ ಎನ್ನುತ್ತಾರೆ ಎಪಿಎಂಸಿ ವರ್ತಕರು.

‘ಸಲೂನ್‌ಗಳು ಆರಂಭವಾಗಿದ್ದರೂ,ವಹಿವಾಟು ಚುರುಕು ಪಡೆದಿಲ್ಲ. ಆರೇಳು ಗ್ರಾಹಕರು ಮಾತ್ರ ಬಂದಿದ್ದಾರೆ’ ಎಂದು ಸಲೂನ್ ಮಾಲೀಕ ಸತೀಶ್ ಹೇಳಿದರು.

ಬೆಂಗಳೂರಿನತ್ತ ಜನ

ಕೊರೊನಾ ಭಯದಿಂದಾಗಿ ಊರು ಕಡೆಗೆ ಹೋಗಿದ್ದ ಜನ ಬೆಂಗಳೂರಿನತ್ತ ಮತ್ತೆ ಬರುತ್ತಿದ್ದಾರೆ. ನಗರದಲ್ಲಿ ಬುಧವಾರ ಮಧ್ಯಾಹ್ನದ ನಂತರ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ನೆಲಮಂಗಲ ಬಳಿಯ ತುಮಕೂರು ರಸ್ತೆಯಲ್ಲಿರುವ ಟೋಲ್‌ ಸಂಗ್ರಹ ಕೇಂದ್ರದಲ್ಲಿ ಲಾಕ್‌ಡೌನ್ ಮುನ್ನ ದಿನಗಳಂತೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಬಸ್‌ಗಳಲ್ಲಿ ಕಡಿಮೆ ಜನರ ಪ್ರಯಾಣಕ್ಕೆ ಅವಕಾಶ ಇರುವ ಕಾರಣ ಬೈಕ್‌, ಕಾರು, ಆಟೊರಿಕ್ಷಾಗಳಲ್ಲೇ ಕುಟುಂಬ ಸಮೇತ ಬೆಂಗಳೂರು ತಲುಪುತ್ತಿದ್ದಾರೆ. ಪರಿಣಾಮವಾಗಿ ನಗರದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.