ADVERTISEMENT

ಕೋವಿಡ್‌–19: ‘ಸಹಾಯವಾಣಿ’ ಸೌಲಭ್ಯ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 19:46 IST
Last Updated 6 ಮಾರ್ಚ್ 2020, 19:46 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ಕೋವಿಡ್‌–19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ನಾಲ್ಕು ಲೈನ್‌ಗಳನ್ನು ಹೊಂದಿದ್ದ ‘104’ ಆರೋಗ್ಯ ಸಹಾಯವಾಣಿಯನ್ನು 10 ಲೈನ್‌ಗಳಿಗೆ ವಿಸ್ತರಿಸಲಾಗಿದೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಶುಕ್ರವಾರ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಈ ಸೋಂಕಿನ ಬಗ್ಗೆ ಗೊಂದಲ ಹಾಗೂ ಆತಂಕಗಳನ್ನು ಸೃಷ್ಟಿಸಲಾಗುತ್ತಿದೆ. ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು. ನಿಖರ ಮಾಹಿತಿಗಾಗಿ ಸಹಾಯವಾಣಿಗೆ ಕರೆ ಮಾಡಬೇಕು. ಈ ಸೋಂಕು ನಿವಾರಣೆಗೆ ಎಲ್ಲಿಯೂ ಔಷಧಿಗಳನ್ನು ಸಂಶೋಧಿಸಿಲ್ಲ.ಮಾಸ್ಕ್‌ಗಳು ಮತ್ತು ಔಷಧಿ ತಯಾರಕರ ಜತೆಗೆ ಮಾತುಕತೆ ನಡೆಸಿದ್ದು, ಅಭಾವ ಸೃಷ್ಟಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಈ ಸೋಂಕಿನ ಬಗ್ಗೆ ಅನಗತ್ಯವಾಗಿ ಜನತೆ ಭೀತಿಗೆ ಒಳಗಾಗಿ, ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಗೂ ಗಂಟಲಿನ ದ್ರವ ಮತ್ತು ರಕ್ತದ ಮಾದರಿ ಪರೀಕ್ಷೆಗೆ ಬೇಡಿಕೆ ಇಡುತ್ತಿದ್ದಾರೆ.ಸೋಂಕು ಪ್ರಕರಣ ಅಧಿಕ ವರದಿಯಾದ ದೇಶಕ್ಕೆ ಹೋಗಿ ಬಂದವರು ರೋಗಲಕ್ಷಣ ಕಂಡುಬಂದರೆ ಪರೀಕ್ಷೆಗೆ ಒಳಪಡಬೇಕು. ಆ ದೇಶಗಳಿಂದ ಬಂದವರ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರು ಅನಾರೋಗ್ಯಕ್ಕೆ ಒಳಗಾದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಐಟಿ–ಬಿಟಿ ಕಂಪನಿಗಳು ಹಾಗೂ ಮಾಲ್‌ಗಳಿಗೆ ಈಗಾಗಲೇ ಅನುಸರಿಸಬೇಕಾದ ಮಾರ್ಗಸೂಚಿ ಕಳುಹಿಸಲಾಗಿದೆ’ ಎಂದರು.

ADVERTISEMENT

8 ಮಂದಿಗೆ ಚಿಕಿತ್ಸೆ: ಸೋಂಕಿನ ಲಕ್ಷಣ ಹೊಂದಿರುವ ಒಟ್ಟು 8 ಮಂದಿಗೆ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ 3 ಮಂದಿ ದಾಖಲಾಗಿದ್ದಾರೆ.23 ಮಂದಿಯ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು‍ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ.

‘343 ಮಂದಿಯ ರಕ್ತದ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ 296 ಸೋಂಕು ಶಂಕಿತರ ವರದಿಗಳು ಬಂದಿದ್ದು, ಯಾರಿಗೂ ಸೋಂಕು ತಗುಲಿಲ್ಲ. ಒಟ್ಟು72,542 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ49,594 ಮಂದಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಟ್ಟಿದ್ದಾರೆ. 11 ಮಂದಿ 28 ದಿನಗಳ ನಿಗಾ ಪೂರೈಸಿದ್ದಾರೆ’ ಎಂದು ಸುಧಾಕರ್ ಮಾಹಿತಿ ನೀಡಿದರು.

ಹಬ್ಬದ ಸಂಭ್ರಮಕ್ಕೆ ಆತಂಕ
ಕೋವಿಡ್‌–19 ಸೋಂಕಿನ ಭೀತಿ ಇರುವುದರಿಂದ ಜನದಟ್ಟಣೆ ಇರುವ ಪ್ರದೇಶದಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ಸಾರ್ವಜನಿಕರು ಅದ್ದೂರಿಯಾಗಿ ಹೋಳಿ ಹಬ್ಬ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಆದ್ದರಿಂದ ಇದೇ 9 ಮತ್ತು 10ಕ್ಕೆ ನಡೆಯಲಿರುವ ಹೋಳಿ ಹಬ್ಬವನ್ನು ನಗರದಲ್ಲಿಯೂ ಸರಳವಾಗಿ ಆಚರಿಸುವ ಸಾಧ್ಯತೆಯಿದೆ. ಈಗಾಗಲೇ ಕೆಲ ಸಂಘಟನೆಗಳು ಈ ಹಬ್ಬವನ್ನು ಆಚರಿಸುವ ನಿರ್ಧಾರದಿಂದ ಹಿಂದೆ ಸರಿದಿವೆ.

ಕೋವಿಡ್‌–19: ಬಯೊಮೆಟ್ರಿಕ್‌ ವಿನಾಯಿತಿಗೆ ಒತ್ತಾಯ
ಕೋವಿಡ್‌–19 ಸೋಂಕು ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ 5 ಸಾವಿರಕ್ಕೂ ಅಧಿಕ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸಿ, ಹಾಜರಾತಿ ಪುಸ್ತಕ ನಿರ್ವಹಿಸಲು ಸುತ್ತೋಲೆ ಹೊರಡಿಸಬೇಕು ಎಂದು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಅವರು ಹೆಚ್ಚುವರಿ ಮುಖ್ಯ ಕಾರ್ಉದರ್ಶಿ ರಾಜೀವ್‌ ಚಾವ್ಲಾ ಅವರಿಗೆಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.