ADVERTISEMENT

ಮೇ 31ರ ವರೆಗೆ ಮೆಟ್ರೊ ರೈಲು ಸಂಚಾರ ಸಂಪೂರ್ಣ ಸ್ಥಗಿತ: ಬಿಎಂಆರ್‌ಸಿಎಲ್‌

ಮುಂದಿನ ಆದೇಶಕ್ಕೆ ಕಾಯುತ್ತಿರುವ ಬಿಎಂಟಿಸಿ

​ಪ್ರಜಾವಾಣಿ ವಾರ್ತೆ
Published 17 ಮೇ 2020, 14:49 IST
Last Updated 17 ಮೇ 2020, 14:49 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ಕೇಂದ್ರ ಸರ್ಕಾರ ಲಾಕ್‌ಡೌನ್‌ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಅಲ್ಲಿಯವರೆಗೂ ಮೆಟ್ರೊ ರೈಲು ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿದೆ. ಆದರೆ, ಸಾರ್ವಜನಿಕ ಬಸ್‌‌ ಸಂಚಾರ ಪ್ರಾರಂಭಿಸುವ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿರುವುದರಿಂದ, ಮುಂದಿನ ಆದೇಶಕ್ಕಾಗಿ ಬಿಎಂಟಿಸಿ ಕಾಯುತ್ತಿದೆ.

‘ಕೇಂದ್ರ ಗೃಹಸಚಿವಾಲಯದ ಆದೇಶದಂತೆ ಮೇ 31ರವರೆಗೆ ಮೆಟ್ರೊ ರೈಲು ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.

ರೈಲುಗಳನ್ನು ಸುಸ್ಥಿತಿಯಲ್ಲಿ ಮತ್ತು ಪವರ್‌ ಮೋಡ್‌ನಲ್ಲಿ ಇರಿಸುವ ಉದ್ದೇಶದಿಂದ ಒಂದು ಪರೀಕ್ಷಾರ್ಥ ರೈಲು ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಮೆಟ್ರೊ ನಿಲ್ದಾಣಗಳ ಬಳಿಯ ವಾಹನ ನಿಲುಗಡೆ ಸ್ಥಳಗಳು ಮತ್ತು ನಿಲ್ದಾಣದೊಳಗಿನ ವಾಣಿಜ್ಯ ಮಳಿಗೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದೂ ಅದು ತಿಳಿಸಿದೆ.

‘ಮುಂದಿನ ಆದೇಶದವರೆಗೆ ಬಿಎಂಟಿಸಿ ಬಸ್ ಇಲ್ಲ’

‘ಕೇಂದ್ರ ಸರ್ಕಾರ ಈಗ ಹೊರಡಿಸಿರುವ ಲಾಕ್‌ಡೌನ್‌ ಮಾರ್ಗಸೂಚಿಗಳಲ್ಲಿ, ಬಸ್‌ಗಳು ನಿರ್ಬಂಧಿತ ಪಟ್ಟಿಯಲ್ಲಿ ಇಲ್ಲ. ರಾಜ್ಯ ಸರ್ಕಾರವೇ ಈ ಕುರಿತು ತೀರ್ಮಾನ ಕೈಗೊಳ್ಳಬೇಕು. ಈಗಾಗಲೇ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮೇ 19ರವರೆಗೆ ಬಸ್‌ ಸಂಚಾರ ಬೇಡ ಎಂದಿದ್ದಾರೆ. ಆದರೆ, ಸೋಮವಾರ (ಮೇ 18) ಈ ಕುರಿತು ಸಭೆ ನಡೆಯಲಿದ್ದು, ಅಂತಿಮ ತೀರ್ಮಾನ ಹೊರಬೀಳಲಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರ ನಡೆಯುವ ಸಭೆಯಲ್ಲಿ ಮೇ 19ರಿಂದಲೇ ಬಸ್‌ ಸಂಚಾರ ಆರಂಭಿಸಲು ಅನುಮತಿ ಸಿಗಬಹುದು ಅಥವಾ ಸಂಚಾರ ನಿರ್ಬಂಧ ಮುಂದುವರಿಯಲೂ ಬಹುದು. ಮುಂದಿನ ಆದೇಶವನ್ನು ನಾವು ಕಾಯುತ್ತಿದ್ದೇವೆ. ಅನುಮತಿ ಸಿಗುತ್ತಿದ್ದಂತೆ ಸೇವೆ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.