ADVERTISEMENT

ಕಳ್ಳರಿಗಿಲ್ಲ ಲಾಕ್‌ಡೌನ್: ಗರಿಷ್ಠ ಹಾಲು ಕೊಡುವ ಹಸು ಕದ್ದೊಯ್ದರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2020, 10:27 IST
Last Updated 4 ಮೇ 2020, 10:27 IST
   

ಬೆಂಗಳೂರು: ಲಾಕ್‌ಡೌನ್ ಸಂದರ್ಭ ಕಳ್ಳರ ಕೈಚಳಕದ ವಿಧಾನವೂ ಬದಲಾಗಿದೆ. ವಿಶ್ವದಲ್ಲೇ ಗರಿಷ್ಠ ಹಾಲು ಕೊಡುವ ತಳಿ ಎಂದು ಪರಿಗಣಿಸಲಾಗಿರುವ ಹೋಲ್‌ಸ್ಟೈನ್ ಫ್ರೈಷಿಯನ್ ತಳಿಯ ಹಸುವೊಂದನ್ನು ಹೆಣ್ಣೂರಿನಲ್ಲಿ ಕಳೆದ ವಾರ ಕಳವು ಮಾಡಲಾಗಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಹಸುವನ್ನೂ ವಶಪಡಿಸಿಕೊಳ್ಳಲಾಗಿದೆ.

ಬಿಳಿ, ಕಪ್ಪು ಬಣ್ಣದ ಹಸುವನ್ನು ಅಮೃತನಗರದ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸೊಂದರ ಗೇಟಿಗೆ ಕಟ್ಟಿಹಾಕಲಾಗಿತ್ತು. ಪ್ರತಿ ದಿನ ಅದೇ ಜಾಗದಲ್ಲಿ ಹಸುವನ್ನು ಕಟ್ಟಿಹಾಕಲಾಗುತ್ತಿತ್ತು.

ಏಪ್ರಿಲ್ 30ರಂದು ಸಂಜೆ 4.30ಕ್ಕೆ ಹಸುವನ್ನು ಗೇಟಿಗೆ ಕಟ್ಟಿ ಹಾಕಿದ್ದ ಮಾಲೀಕ ಮುನಿರಾಜು ಅಲ್ಲಿಂದ ತೆರಳಿದ್ದರು. ಇದಾಗಿ 15 ನಿಮಿಷ ಕಳೆಯುವಷ್ಟರಲ್ಲಿ ಹಸು ಅಲ್ಲಿಂದ ನಾಪತ್ತೆಯಾಗಿದೆ. ಸ್ಥಳಕ್ಕೆ ಬಂದಾಗ ದನ ಕಾಣದೆ ಇದ್ದುದರಿಂದ ಮುನಿರಾಜು ಅವರು ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಹೋಂಡಾ ಡಿಯೊದಲ್ಲಿ ಬಂದ ಇಬ್ಬರು ದನವನ್ನು ಕೊಂಡೊಯ್ದಿರುವುದು ಕಂಡುಬಂದಿದೆ

ADVERTISEMENT

ಬಳಿಕ ಈ ಸಿಸಿಟಿವಿ ದೃಶ್ಯಾವಳಿಯೊಂದಿಗೆ ಅವರು ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶಂಕಿತರ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ್ದಾರೆ.

ಮುನಿರಾಜು ಅವರ ದನ ಕಳವಾಗಿರುವುದು ಇದೇ ಮೊದಲಲ್ಲ. ಅವರು 10 ದನಗಳ ಮಾಲೀಕರಾಗಿದ್ದು, ಏಪ್ರಿಲ್ 13ರಂದು ಮತ್ತು 16ರಂದು ಕ್ರಮವಾಗಿ ಒಂದೊಂದು ಹಸು ಕಳವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಹಿಂದಿನ ಕಳ್ಳತನ ‍ಪ್ರಕರಣಗಳಲ್ಲಿ ಕಳ್ಳರನ್ನು ಹಿಡಿಯಲು ಯಾವುದೇ ಸುಳಿವು ಲಭ್ಯವಿರಲಿಲ್ಲ. ಈ ಬಾರಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ್ದು ನನ್ನ ಅದೃಷ್ಟ. ಹೋಲ್‌ಸ್ಟೈನ್ ಫ್ರೈಷಿಯನ್ ತಳಿಯ ಹಸುವೊಂದಕ್ಕೆ ಕನಿಷ್ಠ ₹ 40 ಸಾವಿರ ಇದೆ’ ಎಂದಿದ್ದಾರೆ ಮುನಿರಾಜು.

ನಾಗರಾಜ ಮತ್ತು ಸುಶೀಲಮ್ಮ ಎಂಬ ಕೃಷಿಕ ದಂಪತಿ ಹಡು ಕೂಡ ಈಚೆಗೆ ಕಳವಾಗಿತ್ತು. ಅವರಿಗೆ ಕಳ್ಳರ ಬಗ್ಗೆ ಸುಳಿವೇ ಇರಲಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

‘ಮುನಿರಾಜು ಅವರ ದನವನ್ನು ಕದ್ದಿದ್ದ ಕಳ್ಳರು ಅದನ್ನು ಹೊರ ವರ್ತುಲ ರಸ್ತೆವರೆಗೂ ನಡೆಸಿಕೊಂಡು ಹೋಗಿದ್ದರು. ಅಲ್ಲಿಂದ ಸರಕುಸಾಗಣೆ ವಾಹನದಲ್ಲಿ ಕೊಂಡೊಯ್ದಿದ್ದರು. ಅವರಿಬ್ಬರೂ ಕೆಲವು ಹಸುಗಳನ್ನು ಕಳವು ಮಾಡಿದ್ದು, ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದೆವು. ತ್ವರಿತವಾಗಿ ಹಣ ಸಂಪಾದನೆ ಮಾಡುವುದಕ್ಕಾಗಿ ಅವರು ಹಸುಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು’ ಎಂದೂ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.