ADVERTISEMENT

ಪ್ರಯಾಣಿಕರ ಮೇಲೆ ಹಲ್ಲೆ: ಬಂಧನ

ಬಿಎಂಟಿಸಿ ಬಸ್ಸಿನಲ್ಲಿ ಘಟನೆ l ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:22 IST
Last Updated 27 ಮೇ 2019, 19:22 IST
   

ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ರಂಪಾಟ ಮಾಡಿದ್ದ ವ್ಯಕ್ತಿಯೊಬ್ಬ, ಸಹ ಪ್ರಯಾಣಿಕರ ಮೇಲೆಯೇ ಚಾಕು ಹಾಗೂ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ.

ಶ್ರೀನಗರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ರಂಪಾಟ ಮಾಡಿದ್ದ ವ್ಯಕ್ತಿಯನ್ನು ಕಿಶೋರ್‌ ಎಂದು ಗುರುತಿಸಲಾಗಿದ್ದು, ಕಾಟನ್‌ಪೇಟೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

‘ಕೇರಳದವ ಎಂದು ಹೇಳಲಾಗುತ್ತಿರುವ ಕಿಶೋರ್, ಸಂಜೆ 4ರ ಸುಮಾರಿಗೆ ಬಸ್‌ ಹತ್ತಿದ್ದ. ಕಾಟನ್‌ಪೇಟೆ ಬಳಿ ಬಸ್ ಸಾಗುತ್ತಿದ್ದ ವೇಳೆಯಲ್ಲೇ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ಪ್ರಯಾಣಿಕರಿಗೆ ತೋರಿಸಿ ಬೆದರಿಸಿದ್ದ. ಜತೆಗೆ, ಪ್ರಯಾಣಿಕ ಬಾಬು ಎಂಬುವರಿಗೆ ಚಾಕುವಿನಿಂದ ಇರಿದಿದ್ದ. ಅದರಿಂದ ಸಹಪ್ರಯಾಣಿರು ಗಾಬರಿಗೊಂಡು ಕೂಗಾಡಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬಾಬು ಬಸ್ಸಿನಲ್ಲೇ ಕುಸಿದು ಬಿದ್ದಿದ್ದರು. ಪ್ರಯಾಣಿಕರು ಕಿಶೋರ್‌ನನ್ನು ಹಿಡಿಯಲು ಮುಂದಾಗಿದ್ದರು. ಬಸ್ಸಿನ ಬಾಗಿಲು ಬಳಿ ನಿಂತಿದ್ದ ಆತ, ರಾಡ್‌ನಿಂದ ಪ್ರಯಾಣಿಕರಿಗೆ ಹೊಡೆಯಲಾರಂಭಿಸಿದ್ದ. ಪ್ರಯಾಣಿಕರಿಬ್ಬರು ಬಸ್ಸಿನಲ್ಲೇ ಕುಸಿದು ಬಿದ್ದರು’ ಎಂದರು.

‘ಸಹಾಯಕ್ಕೆ ಬಂದ ಸಾರ್ವಜನಿಕರು, ಬಸ್ಸಿನೊಳಗೆ ಹೋಗಿ ಕಿಶೋರ್‌ನನ್ನು ಹಿಡಿದುಕೊಂಡರು. ಸ್ಥಳಕ್ಕೆ ಹೋದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದರು’ ಎಂದು ಪೊಲೀಸರು ಹೇಳಿದರು.

ಆಸ್ಪತ್ರೆಗೆ ದಾಖಲು: ‘ಆರೋಪಿ ರಂಪಾಟ ಮಾಡಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ವಿಚಾರಣೆ ನಡೆಸಲಿದ್ದೇವೆ’ ಎಂದು ಪೊಲೀಸರು ವಿವರಿಸಿದರು.

‘ಬಾಬು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಗೊಂಡಿರುವ ಇತರೆ ಪ್ರಯಾಣಿಕರಿಂದಲೂ ಹೇಳಿಕೆ ಪಡೆಯಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.