ADVERTISEMENT

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ದಿನಗಣನೆ

218 ಟನ್‌ ಕಂಚು, ಉಕ್ಕು ಬಳಕೆ: ಖಡ್ಗದ ತೂಕ 4 ಸಾವಿರ ಕೆ.ಜಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 20:07 IST
Last Updated 8 ನವೆಂಬರ್ 2022, 20:07 IST
ನಾಡಪ್ರಭು ಕೆಂಪೇಗೌಡರ ಪ್ರತಿಮೆ
ನಾಡಪ್ರಭು ಕೆಂಪೇಗೌಡರ ಪ್ರತಿಮೆ   

ದೇವನಹಳ್ಳಿ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಣ್ಮನ ಸೆಳೆಯುವ ಬೃಹತ್ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ. ₹ 84 ಕೋಟಿ ವೆಚ್ಚದಲ್ಲಿಈ ಪ್ರತಿಮೆ ನಿರ್ಮಾಣ ‌ಮಾಡಲಾಗಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಗೊಂಡಿದ್ದು, ಅನಾವರಣಕ್ಕೆ ಸಿದ್ಧತೆ ಭರದಿಂದ ಸಾಗಿದೆ. ನ. 11ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಇದರ ಸಿದ್ಧತೆಗೆ ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅದ್ದೂರಿ ‌ಕಾರ್ಯಕ್ರಮದ ಆಯೋಜನೆಗೆ ಸಕಲ ಸಿದ್ಧತೆ ನಡೆದಿದೆ. ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಸೇರುವ ‌ಸಾಧ್ಯತೆಯಿದೆ. ಇದಕ್ಕಾಗಿ ವಿಮಾನ ನಿಲ್ದಾಣ ಪಕ್ಕದ ಭುವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಮೀಪ ಸುಮಾರು 50 ಎಕರೆ ಜಾಗದಲ್ಲಿ ವೇದಿಕೆ ‌ಕಾರ್ಯಕ್ರಮ, ಜನರು ಕೂರಲು ವ್ಯವಸ್ಥೆ ಮಾಡಲಾಗುತ್ತಿದೆ.

ದೂರದ ಊರುಗಳಿಂದ ಬರುವ ಜನರ ವಾಹನಗಳು, ಬಸ್, ಕಾರುಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಈಗಾಗಲೇ ರಾಷ್ಟ್ರೀಯ ಭದ್ರತಾ ದಳದ ಅಧಿಕಾರಿಗಳು ದೇವನಹಳ್ಳಿ ಸುತ್ತಮುತ್ತ ಗಸ್ತಿನಲ್ಲಿದ್ದಾರೆ. ಕಾರ್ಯಕ್ರಮದ ದಿನ 1,500 ಸಂಚಾರ ಪೊಲೀಸರು ಹಾಗೂ 2,500 ಸಿವಿಲ್‌ ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

23 ಎಕರೆಯಲ್ಲಿ ಪಾರ್ಕ್:ಕೆಂಪೇಗೌಡರ ಮೂರ್ತಿಯ ಸುತ್ತ 23 ಎಕರೆಯಲ್ಲಿ ಸುಂದರವಾದ ಥೀಮ್‌ ಪಾರ್ಕ್‌ ನಿರ್ಮಾಣವಾಗಲಿದೆ. ಈ ಪಾರ್ಕ್ ಕೆಂಪೇಗೌಡರ ಸಮಗ್ರ ಕಥೆ ಹೇಳಲಿದೆ. ಅವರ ಸಾಧನೆ ಬಿಂಬಿಸುವ ಜತೆಗೆ ಬೆಂಗಳೂರಿನ ಇತಿಹಾಸವನ್ನು ಈ ಪಾರ್ಕ್‌ನಲ್ಲಿ ಪ್ರಸ್ತುತಪಡಿಸಲಾಗಲಿದೆ. ಸದ್ಯಕ್ಕೆ ‌ಈ ಕಾರ್ಯ ಪ್ರಗತಿಯಲ್ಲಿದೆ. ಸದ್ಯ ಕೆಂಪೇಗೌಡರ ಪ್ರತಿಮೆ ಮಾತ್ರ ಅನಾವರಣಗೊಳ್ಳಲಿದೆ‌. ಉಳಿದಂತೆ ನಿರ್ಮಾಣಗೊಳ್ಳಲಿರುವ ಪಾರ್ಕ್ ಕೂಡ ಪ್ರವಾಸಿಗರನ್ನು ಸೆಳೆಯಲಿದೆ.

ಪ್ರತಿಮೆ ವಿಶೇಷತೆ ಏನು?

ಕೆಂಪೇಗೌಡರ ಪ್ರತಿಮೆಯನ್ನು 218 ಟನ್ ಕಂಚು ಹಾಗೂ ಉಕ್ಕು ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ.

98 ಟನ್ ಕಂಚು, 120 ಟನ್ ಉಕ್ಕನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೆಂಪೇಗೌಡರು ಕೈಯಲ್ಲಿ ಹಿಡಿದಿರುವ ಖಡ್ಗದ ತೂಕ ಬರೋಬ್ಬರಿ 4 ಸಾವಿರ ಕೆ.ಜಿ. ಅಲ್ಲದೇ, ಪ್ರತಿಮೆಯ ಪೀಠದ ನಾಲ್ಕು ಭಾಗದಲ್ಲಿಯೂ ಕೆಂಪೇಗೌಡರ ಸಾಧನೆಗಳನ್ನು ಚಿತ್ರಿಸಲಾಗಿದೆ. ಜಾತ್ಯತೀತವಾಗಿ ಅವರು ನಗರ ನಿರ್ಮಾಣ ಮಾಡಿದ್ದು, ಬಲಿದಾನ ಕುರಿತು ಮಾಹಿತಿ ಇದರಲ್ಲಿದೆ. ಪ್ರತಿಯೊಂದು ಅಚ್ಚು ಬಿಂಬಗಳು ತಲಾ 1,000 ಕೆ.ಜಿಯಷ್ಟಿವೆ.

ದೇಶದ ವಿಮಾನ ನಿಲ್ದಾಣಗಳ ಪೈಕಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ವಿಮಾನ ನಿಲ್ದಾಣ ಇದಾಗಿದೆ. ಪ್ರತಿದಿನ ಸಾವಿರಾರು ‌ಮಂದಿ ಇಲ್ಲಿ‌ಂದ ಸಂಚರಿಸುತ್ತಾರೆ. ಇದೀಗ ಕೆಂಪೇಗೌಡರ ಪ್ರತಿಮೆ ಅನಾವರಣಗೊಳ್ಳುತ್ತಿದ್ದು ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಸಿಂಗಾರಗೊಳ್ಳುತ್ತಿರುವ ಪಟ್ಟಣ: ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೊಂದಿಕೊಂಡಿರುವ ಹಳ್ಳಿಗಳ ಸಂಪರ್ಕ ರಸ್ತೆಗಳನ್ನು ಬಸ್ ಸಂಚಾರಕ್ಕೆ ಅನುಕೂಲವಾಗುವಂತೆ ವಿಸ್ತರಣೆ ಮಾಡಲಾಗುತ್ತಿದೆ. ದೇವನಹಳ್ಳಿ ಪಟ್ಟಣದ ಮುಖ್ಯರಸ್ತೆಗಳ ಬೀದಿ ದೀಪಗಳನ್ನು ರಿಪೇರಿ ಮಾಡಲಾಗುತ್ತಿದೆ. ರೈತರೊಂದಿಗೆ ಮಾತನಾಡಿ, ಕಾರ್ಯಕ್ರಮಕ್ಕೆ ಬಳಸಿಕೊಳ್ಳುವ ಜಮೀನಿನಲ್ಲಿ ಬೆಳೆ ನಷ್ಟ ಉಂಟಾಗಿದ್ದರೆ ಪರಿಹಾರ ನೀಡಲು ಕಂದಾಯ ಇಲಾಖೆ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.