
ಬೆಂಗಳೂರು: ಒಂಬತ್ತನೇ ರಾಷ್ಟ್ರೀಯ ಜಂಟಿ ಐಇಡಿ ಸ್ಪರ್ಧೆಯಲ್ಲಿ ಕರ್ನಾಟಕದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಕೌಂಟರ್–ಐಇಡಿ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ನವದೆಹಲಿಯ ಎನ್‌ಎಸ್‌ಜಿಯಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯ ಪೊಲೀಸರ ತಂಡ ಗೆಲುವು ದಾಖಲಿಸಿದೆ.
ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳೂ ಸೇರಿದಂತೆ 28 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕರ್ನಾಟಕ ತಂಡವನ್ನು ಕರ್ನಲ್ ಎಸ್.ಎಂ. ಅಕುಲ್ ಬಾಲಕೃಷ್ಣ ಅವರು ಮುನ್ನಡೆಸಿದ್ದರು.
ರಾಷ್ಟ್ರೀಯ ಜಂಟಿ ಕೌಂಟರ್ – ಐಇಡಿ ಸ್ಪರ್ಧೆಯಲ್ಲಿ ಬಾಂಬ್ ವಿಲೇವಾರಿ (ಬಿ.ಡಿ) ತಂತ್ರಗಳು, ಐಇಡಿ ಗುರುತಿಸುವಿಕೆ ಮತ್ತು ತಟಸ್ಥೀಕರಣ, ಸಂಕೀರ್ಣ ಸನ್ನಿವೇಶ ಆಧಾರಿತ ಕಾರ್ಯಾಚರಣೆಗಳ ಕುರಿತು ತಂಡಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ. ರಾಜ್ಯ ತಂಡವು ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಪಡೆಯಿತು. ಹ್ಯಾಟ್ರಿಕ್ ಗೆಲುವು ಸಾಧಿಸಿದ ದೇಶದ ಏಕೈಕ ಪೊಲೀಸ್ ಪಡೆ ಎಂಬ ಖ್ಯಾತಿಗೆ ರಾಜ್ಯ ತಂಡವು ಭಾಜನವಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸತತ ಮೂರು ವರ್ಷವೂ ರಾಜ್ಯದ ತಂಡವು ಜಯ ಗಳಿಸುವ ಮೂಲಕ ಉತ್ತಮ ಸಾಧನೆ ತೋರಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಶ್ಲಾಘಿಸಿದ್ದಾರೆ.
ವಿವಿಧ ಸ್ಪರ್ಧೆಗಳು (ಎಲ್ಲ ವಿಭಾಗದಲ್ಲೂ ಪ್ರಥಮ ಸ್ಥಾನ)
* ಬಿ.ಡಿ ಕೋರ್ಸ್‌ಗಳು ಮತ್ತು ಬಿ.ಡಿ ಅನುಭವ
* ಸ್ಫೋಟಕಗಳು ಬಿ.ಡಿ ಉಪಕರಣಗಳು ಐಇಡಿ ಪತ್ತೆ ಹಚ್ಚುವಿಕೆ
* ಐಇಡಿಗಳ ತಯಾರಿಕೆ
* ಮೌಖಿಕ ಪರೀಕ್ಷೆ
* ರಸಪ್ರಶ್ನೆ ಪರೀಕ್ಷೆ
* ಬಿ.ಡಿ ಸಲಕರಣೆ ನಿರ್ವಹಣೆ
* ಕೌಂಟರ್–ಐಇಡಿ ವ್ಯಾಯಾಮಗಳು (ವಿವಿಧ ಸನ್ನಿವೇಶಗಳು)
* ಕೇಸ್ ಸ್ಟಡಿ ಪ್ರಸ್ತುತಿಪಡಿಸುವಿಕೆ * ಕೆ–9 (ಸ್ಫೋಟಕ ಪತ್ತೆ ಶ್ವಾನ ಸ್ಪರ್ಧೆ)
* ಹೊಸ ಆವಿಷ್ಕಾರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.