ADVERTISEMENT

ಕುರುಬರಹಳ್ಳಿ: ಚಿತಾಗಾರದಲ್ಲಿ 15 ಶವಗಳ ದಹನ

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 20:49 IST
Last Updated 25 ಏಪ್ರಿಲ್ 2021, 20:49 IST
ಕುರುಬರಹಳ್ಳಿ ಸ್ಮಶಾನದಲ್ಲಿ ಭಾನುವಾರ ಶವಗಳನ್ನು ಸುಡಲಾಯಿತು
ಕುರುಬರಹಳ್ಳಿ ಸ್ಮಶಾನದಲ್ಲಿ ಭಾನುವಾರ ಶವಗಳನ್ನು ಸುಡಲಾಯಿತು   

ಬೆಂಗಳೂರು: ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಆರಂಭಿಸಲಾಗಿರುವ ಚಿತಾಗಾರದಲ್ಲಿ ಭಾನುವಾರ ಒಟ್ಟು 15 ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ನಾಲ್ಕು ಎಕರೆ ವಿಸ್ತೀರ್ಣದ ಈ ಜಾಗದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಚಿತಾಗಾರ ನಿರ್ಮಿಸಲಾಗಿದ್ದು, ಕೋವಿಡ್‌ನಿಂದ ಮೃತಪಟ್ಟವರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಅವಕಾಶ ಒದಗಿಸಲಾಗಿದೆ. ಜೊತೆಗೆ ಮೃತ ವ್ಯಕ್ತಿಗಳ ಚಿತಾಭಸ್ಮವನ್ನು ಮಡಿಕೆಯಲ್ಲಿ ತುಂಬಿ ಅವರ ಕುಟುಂಬದ ಸದಸ್ಯರಿಗೆ ಒದಗಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ‘ಮೊದಲ ದಿನವಾದ ಭಾನುವಾರ 15 ಶವಗಳನ್ನು ಸುಡಲಾಯಿತು. ಇಲ್ಲಿ 25 ಶವಗಳನ್ನು ಏಕಕಾಲದಲ್ಲಿ ದಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ಶವ ಸುಡಲು ಕನಿಷ್ಠ 5 ಗಂಟೆ ಬೇಕಾಗುತ್ತದೆ. ದಿನದಲ್ಲಿ 50 ಶವಗಳನ್ನು ಸುಡಬಹುದು. 200 ಶವಗಳನ್ನು ಸುಡಲು ಬೇಕಿರುವಷ್ಟು ಕಟ್ಟಿಗೆಯನ್ನು ಈಗಾಗಲೇ ಸಂಗ್ರಹಿಸಿಡಲಾಗಿದೆ. ಕಟ್ಟಿಗೆಯ ಸಮಸ್ಯೆಯಂತೂ ಇಲ್ಲ. ಶವ ಸಂಸ್ಕಾರದಲ್ಲಿ ಒಟ್ಟು 25 ಮಂದಿಗೆ ಭಾಗವಹಿಸಲು ಅವಕಾಶವಿದೆ. ಶವದ ಪೂಜೆಗೆ, ಹಾಲು ಮತ್ತು ತುಪ್ಪ ಬಿಡಲು ಸಂಬಂಧಿಕರಿಗೆ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯವರು ಸಂಗ್ರಹಿಸಿಟ್ಟಿದ್ದ ಕಟ್ಟಿಗೆಗಳನ್ನು ಇದಕ್ಕೆ ಬಳಸಲಾಗುತ್ತಿದೆ. ಶವ ಸುಡಲು ಒಟ್ಟು 100 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಿಗೆ ಹಾಸ್ಟೆಲ್‌ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಲಾಗಿದೆ. ಶವ ಸುಡುವ ವೇಳೆ ಅದನ್ನು ಕಡ್ಡಾಯವಾಗಿ ಧರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ನಾಲ್ಕು ಎಕರೆಯಲ್ಲಿ ಒಟ್ಟು ಮೂರು ಕಡೆ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮಳೆ ಬಂದರೂ ಏನೂ ತೊಂದರೆಯಾಗುವುದಿಲ್ಲ’ಎಂದರು.

‘ಎರಡು ಕಡೆ ಬೋರ್‌ವೆಲ್‌ ತೆಗೆಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಶಾಮಿಯಾನಗಳನ್ನೂ ಹಾಕಿಸಲಾಗಿದೆ. ಗಿಡ್ಡೇನಹಳ್ಳಿಯಲ್ಲಿರುವ ಚಿತಾಗಾರಕ್ಕೆ ಇನ್ನೆರಡು ದಿನಗಳಲ್ಲಿ ಚಾಲನೆ ನೀಡಲಾಗುತ್ತದೆ’ ಎಂದು ಹೇಳಿದರು.

ಕಾಮಗಾರಿ ಪರಿಶೀಲಿಸಿದ ಅಶೋಕ್‌
ಕಂದಾಯ ಸಚಿವ ಆರ್‌.ಅಶೋಕ್‌ ಕುರುಬರಹಳ್ಳಿಯಲ್ಲಿ ನಿರ್ಮಿಸಿರುವ ಚಿತಾಗಾರಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು ‘ನೂತನ‌ ಚಿತಾಗಾರದಿಂದಾಗಿ ನಗರದಲ್ಲಿ ಈಗಾಗಲೇ ಉದ್ಭವಿಸಿರುವ ಸಮಸ್ಯೆ ಪರಿಹಾರವಾಗಲಿದೆ. ಅಂತ್ಯಕ್ರಿಯೆಗೆ ಗಂಟೆಗಟ್ಟಲೆ ಕಾಯುವುದೂ ತಪ್ಪಲಿದೆ’ ಎಂದರು.

7 ಚಿತಾಗಾರಗಳು ಮೀಸಲು
ಬೆಂಗಳೂರು: ನಗರದಲ್ಲಿ ಕೋವಿಡ್‌ನಿಂದ ಮೃತ‌ಪಟ್ಟವರ ಸಂಖ್ಯೆ ಏರುತ್ತಿರುವ ಕಾರಣ ಶವಸಂಸ್ಕಾರಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಪರಿಹರಿಸಲು ಮುಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಟ್ಟು ಏಳು ವಿದ್ಯುತ್‌ ಚಿತಾಗಾರಗಳನ್ನು ಮೀಸಲಿಟ್ಟಿದೆ.

‘ಮೇಡಿ ಅಗ್ರಹಾರ, ಕೂಡ್ಲು, ಪಣತೂರು, ಕೆಂಗೇರಿ, ಸುಮನಹಳ್ಳಿ, ಪೀಣ್ಯ ಹಾಗೂ ಬನಶಂಕರಿ ಚಿತಾಗಾರಗಳನ್ನು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಬಿಬಿಎಂಪಿ ಸಹಾಯವಾಣಿ ಮೂಲಕ ನೋಂದಣಿ ಮಾಡಿಸಿಕೊಂಡ ಬಳಿಕವೇ ಶವಗಳನ್ನು ಈ ಚಿತಾಗಾರಗಳಿಗೆ ತೆಗೆದುಕೊಂಡು ಹೋಗಬೇಕು. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಗರಿಷ್ಠ 5 ಮಂದಿ ಮಾತ್ರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕು’ ಎಂದು ಬಿಬಿಎಂಪಿ ತಿಳಿಸಿದೆ.

‘ಏಳು ಚಿತಾಗಾರಗಳಲ್ಲೂ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಚಿತಾಗಾರಗಳಲ್ಲಿನ ಸಿಬ್ಬಂದಿ ಕಡ್ಡಾಯವಾಗಿ ಪಿಪಿಇ ಕಿಟ್‌ ಧರಿಸಿರಬೇಕು. ಈ ಸಂಬಂಧ ಮಾರ್ಷಲ್ ಗಳು ಪ್ರತಿನಿತ್ಯ ಛಾಯಾಚಿತ್ರಗಳನ್ನು ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲು ನಿರ್ದೇಶಿಸಲಾಗಿದೆ.ಆರ್.ಎಫ್.ಐ.ಡಿ ಅಳವಡಿಸಿರುವ ಶವ ಸಾಗಾಣೆ ವಾಹನಗಳಿಗೆ ಮಾತ್ರ ಒಳಗಡೆ ಅನುಮತಿ ನೀಡಲಾಗುತ್ತದೆ. ಇತರ ಐದು ಚಿತಾಗಾರಗಳಲ್ಲೂ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿದೆ’ ಎಂದುಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.