ADVERTISEMENT

ಬೆಂಗಳೂರು: ಕೋವಿಡ್ ಪೀಡಿತರ ಸಂಖ್ಯೆ 94 ಸಾವಿರಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:42 IST
Last Updated 18 ಆಗಸ್ಟ್ 2020, 19:42 IST
   

ಬೆಂಗಳೂರು: ನಗರದಲ್ಲಿ ಮಂಗಳವಾರ 2,242 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 94 ಸಾವಿರ ದಾಟಿದೆ.

18 ದಿನಗಳಲ್ಲಿ 38,562 ಮಂದಿ ಕೋವಿಡ್ ಪೀಡಿತರಾಗಿದ್ದು, ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 2,142 ಮಂದಿ ಸೋಂಕಿತರಾಗಿದ್ದಾರೆ. ಹತ್ತು ದಿನಗಳಿಂದ ಪಶ್ಚಿಮ ವಲಯದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಅವಧಿಯಲ್ಲಿ ನಗರದಲ್ಲಿ ಸೋಂಕಿತರಾದವರಲ್ಲಿ ಶೇ 25 ರಷ್ಟು ಮಂದಿ ಆ ಭಾಗಕ್ಕೆ ಸೇರಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಶೇ 16 ರಷ್ಟು ಪ್ರಕರಣಗಳು ವರದಿಯಾಗಿವೆ. ಸದ್ಯ 33 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿತರಲ್ಲಿ ಮತ್ತೆ 49 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 1,532ಕ್ಕೆ ಏರಿಕೆಯಾಗಿದೆ.

ಮತ್ತೆ 3,520 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 59 ಸಾವಿರದ ಗಡಿ ದಾಟಿದೆ. 329 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ನಗರದ ಜ್ವರ ಚಿಕಿತ್ಸಾಲಯಗಳಲ್ಲಿ ಒಂದೇ ದಿನ 4,134 ಮಂದಿಯನ್ನು ತಪಾಸಣೆ ಮಾಡಲಾಗಿದೆ.

ADVERTISEMENT

ಬಯೋಕಾನ್ ಅಧ್ಯಕ್ಷೆಗೆ ಸೋಂಕು: ಬಯೋಕಾನ್‌ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್‌ ಶಾ ಅವರು ಕೋವಿಡ್ ಪೀಡಿತರಾಗಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ‘ಕೋವಿಡ್ ಪರೀಕ್ಷೆಯ ವರದಿಯಲ್ಲಿ ಸೋಂಕಿತಳಾಗಿರುವುದು ದೃಢಪಟ್ಟಿದೆ. ಆದರೆ, ಸೋಂಕಿನ ಲಕ್ಷಣಗಳು ಅಷ್ಟಾಗಿ ಗೋಚರಿಸಿಲ್ಲ. ಈ ಕಾಯಿಲೆ ಗುಣವಾಗುತ್ತದೆ ಎಂಬ ನಂಬಿಕೆ ಹೊಂದಿದ್ದೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.