ADVERTISEMENT

ರಾಜಧಾನಿಯಲ್ಲಿ ಕೋವಿಡ್–19: ಲಕ್ಷದ ಗಡಿಯತ್ತ ದಾಪುಗಾಲು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 20:36 IST
Last Updated 19 ಆಗಸ್ಟ್ 2020, 20:36 IST
   
""

ಬೆಂಗಳೂರು: ನಗರದಲ್ಲಿ ಬುಧವಾರ 2,804 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ ಲಕ್ಷದ ಗಡಿಯತ್ತ (96,910) ದಾಪುಗಾಲು ಇರಿಸಿದೆ.

ಮೊದಲ ಕೋವಿಡ್ ಪ್ರಕರಣ ಮಾ.8ರಂದು ವರದಿಯಾಗಿತ್ತು. ಮೊದಲ ಹಂತದ ಲಾಕ್‌ ಡೌನ್ ಅಂತ್ಯವಾಗುವ ವೇಳೆಗೆ ಕೇವಲ 71 ಪ್ರಕರಣಗಳು ಪತ್ತೆಯಾಗಿದ್ದವು. ನಾಲ್ಕನೇ ಹಂತದ ಲಾಕ್‌ ಡೌನ್ ಮುಕ್ತಾಯವಾಗುವ ವೇಳೆ ನಗರದಲ್ಲಿ 4,555 ಮಂದಿ ಸೋಂಕಿತರಾಗಿದ್ದರು. ಬಳಿಕ ಲಾಕ್‌ ಡೌನ್ ಸಡಿಲಿಸಿದ ಪರಿಣಾಮ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ಸದ್ಯ ಸೋಂಕು ದೃಢ ಪ್ರಮಾಣ ಶೇ 16.87 ರಷ್ಟಿದೆ. 19 ದಿನಗಳಲ್ಲಿ 41,366 ಮಂದಿ ಕೋವಿಡ್ ಪೀಡಿತರಾಗಿದ್ದಾರೆ.

ಈ ತಿಂಗಳು ಪ್ರತಿನಿತ್ಯ ಸರಾಸರಿ 2,177 ಮಂದಿ ಸೋಂಕಿತರಾಗುತ್ತಿದ್ದಾರೆ. ಹತ್ತು ದಿನಗಳಿಂದ ಪಶ್ಚಿಮ ವಲಯದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಅವಧಿಯಲ್ಲಿ ನಗರದಲ್ಲಿ ಸೋಂಕಿತರಾದವರಲ್ಲಿ ಶೇ 25 ರಷ್ಟು ಮಂದಿ ಆ ಭಾಗಕ್ಕೆ ಸೇರಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಶೇ 16 ರಷ್ಟು ಪ್ರಕರಣಗಳು ವರದಿಯಾಗಿವೆ. ಸದ್ಯ 33 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

56 ಮಂದಿ ಸಾವು:ಸೋಂಕಿತರಲ್ಲಿ ಮತ್ತೆ 56 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 1,588ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಮತ್ತೆ 2,549 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 62 ಸಾವಿರದ ಗಡಿ ದಾಟಿದೆ.

ಗುರಿ ತಲುಪಲು ಸೂಚನೆ
ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಪ್ರಯೋಗಾಲಯಗಳ ಮುಖ್ಯಸ್ಥರ ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಆನ್‌ಲೈನ್ ಮೂಲಕ ಬುಧವಾರ ಸಭೆ ನಡೆಸಿದರು. ನಿಗದಿಪಡಿಸಿದ ಗುರಿಯಂತೆ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದರು.

‘ಕೊರೊನಾ ಸೋಂಕಿತರನ್ನು ಬೇಗ ಪತ್ತೆ ಮಾಡಿದಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ತಗ್ಗಿಸಬಹುದು. ಈ ನಿಟ್ಟಿನಲ್ಲಿ ಪ್ರಯೋಗಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು. ಪರೀಕ್ಷೆ ನಡೆಸಲು ಇರುವ ಅಡ್ಡಿಗಳನ್ನು ನಿವಾರಿಸಲು ಸರ್ಕಾರ ಎಲ್ಲ ಬಗೆಯ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

ನಗರದ ಜ್ವರ ಚಿಕಿತ್ಸಾಲಯಗಳಲ್ಲಿ ಒಂದೇ ದಿನ 5,454 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಈವರೆಗೆ ಒಂದು ದಿನದ ಅವಧಿಯಲ್ಲಿ ನಡೆಸಿದ ಗರಿಷ್ಠ ತಪಾಸಣೆಗಳು ಇವಾಗಿವೆ. ಈ ಚಿಕಿತ್ಸಾಲಯಗಳಲ್ಲಿ ಈವರೆಗೆ ಒಟ್ಟು 1.21 ಲಕ್ಷ ಮಂದಿಯನ್ನು ಪರೀಕ್ಷೆ ಮಾಡಲಾಗಿದೆ.

ವೈದ್ಯಕೀಯ ಸಂಸ್ಥೆಗಳನೋಂದಣಿ ಪ್ರಕ್ರಿಯೆ ಸರಳೀಕರಣ
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದಡಿ (ಕೆಪಿಎಂಇ ಕಾಯ್ದೆ) ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣ ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್ ಪಾಂಡೆ ಸುತ್ತೋಲೆ ಹೊರಡಿಸಿದ್ದಾರೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಮತ್ತು ನವೀಕರಣಕ್ಕೆ ಹೊಸ ಪೋರ್ಟಲ್ ಕೂಡ ಪ್ರಾರಂಭಿಸಲಾಗಿದೆ.

ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ವ್ಯಾಪಾರ ಪರವಾನಗಿ ಹೊಂದಿರಬೇಕೆಂಬ ನಿಯಮವನ್ನು ಕೈಬಿಡಲಾಗಿದೆ. ವಾಸ ದೃಢೀಕರಣ ಪತ್ರದ ಬದಲಿಗೆ ತೆರಿಗೆ ಪಾವತಿಸಿದ ರಶೀದಿ, ಗುತ್ತಿಗೆ ಒಪ್ಪಂದ ಅಥವಾ ಬಾಡಿಗೆ ಒಪ್ಪಂದದ ದಾಖಲೆಗಳನ್ನು ಕೂಡ ಮಾನ್ಯ ಮಾಡಲಾಗುತ್ತದೆ. ನಿಗದಿತ ಶುಲ್ಕವನ್ನು ಪಾವತಿಸಿದ ಬಳಿಕ ಸ್ವಯಂ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ನೋಂದಣಿ ಮತ್ತು ನವೀಕರಣದ ಪ್ರಕ್ರಿಯೆಯಲ್ಲಿ ಪರಿಶೀಲನಾ ಹಂತವನ್ನು ಕೈಬಿಟ್ಟಿದ್ದು, ಇನ್ನು ಮುಂದೆ ತಪಾಸಣೆ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.