ADVERTISEMENT

ಹೆಸರಿಗಷ್ಟೇ ಲಾಕ್‌ಡೌನ್‌; ಜನರ ಓಡಾಟ, ವಾಹನ ದಟ್ಟಣೆ

ಆಟೊ, ದ್ವಿಚಕ್ರ ವಾಹನ ಜಪ್ತಿ; ಮಾಸ್ಕ್‌ ಧರಿಸದವರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 20:59 IST
Last Updated 16 ಜುಲೈ 2020, 20:59 IST

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ನಗರದಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್‌ ಹೆಸರಿಗಷ್ಟೇ ಎಂಬಂತಾಗಿದೆ. ನಗರದಲ್ಲಿ ಗುರುವಾರ ಹಲವೆಡೆ ಜನರ ಓಡಾಟ ಹಾಗೂ ವಾಹನಗಳ ಸಂಚಾರ ಕಂಡುಬಂತು. ದಟ್ಟಣೆಯೂ ಉಂಟಾಯಿತು.

ಲಾಕ್‌ಡೌನ್ ಜಾರಿಯಾದ ಎರಡನೇ ದಿನವಾದರೂ ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಜನರ ಓಡಾಟವಿತ್ತು. ಉದ್ಯಾನಗಳು ಬಂದ್ ಮಾಡಲಾಗಿದ್ದು, ಅಷ್ಟಾದರೂ ಹಲವರು ರಸ್ತೆಯಲ್ಲೇ ವಾಯುವಿಹಾರ ಮಾಡಿದರು.

ಬೆಳಿಗ್ಗೆ 5ರಿಂದ 12ರವರೆಗೆ ಅಂಗಡಿಗಳು ತೆರೆದಿದ್ದವು. ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಮನೆಯಿಂದ ಹೊರಗೆ ಬಂದು ಅಂಗಡಿ ಎದುರು ಸರದಿಯಲ್ಲಿ ನಿಂತಿದ್ದು ಕಂಡುಬಂತು.

ADVERTISEMENT

ಮಧ್ಯಾಹ್ನ 12ರ ನಂತರವೂ ವಿಜಯನಗರ, ಚಾಮರಾಜಪೇಟೆ, ರಾಜಾಜಿನಗರ, ಬಸವೇಶ್ವರನಗರ, ಗಾಯತ್ರಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಅಂಗಡಿಗಳು ತೆರೆದಿದ್ದವು. ಪೊಲೀಸರೇ ಲಾಠಿ ಹಿಡಿದುಕೊಂಡು ಅಂಗಡಿಗಳನ್ನು ಮುಚ್ಚಿಸಿದರು. ಹಲವು ಗ್ರಾಹಕರು, ವಸ್ತುಗಳನ್ನು ಖರೀದಿಸಲಾಗದೇ ವಾಪಸು ಮನೆಗೆ ಹೋದರು.

ದಿನಸಿ, ಕಿರಾಣಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ವ್ಯಾಪಾರ ಅಷ್ಟಕ್ಕಷ್ಟೇ ಇತ್ತು. ಹಲವರು ತಳ್ಳುಗಾಡಿಯಲ್ಲೂ ವ್ಯಾಪಾರ ಮಾಡಿದರು.

‘ತರಕಾರಿ ಮಾರಿದರೆ ನಮ್ಮ ಹೊಟ್ಟೆ ತುಂಬುವುದು. ಬೆಳಿಗ್ಗೆಯೇ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದೇನೆ. ಗ್ರಾಹಕರು ಕಡಿಮೆ ಇದ್ದಾರೆ. ಸ್ವಲ್ಪ ವ್ಯಾಪಾರವಾದರೆ ಸಾಕು’ ಎಂದು ವಿಜಯನಗರದ ವ್ಯಾಪಾರಿ ಶಂಕರ್ ಹೇಳಿದರು.

ಶಾರದಮ್ಮ, ‘ರೈತರಿಂದ ಹೂವು ಖರೀದಿಸುತ್ತೇನೆ. ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತೇನೆ. ಲಾಕ್‌ಡೌನ್‌ ಇದ್ದರೂ ಹೊಟ್ಟೆ ಕೇಳಲ್ಲ. ದುಡಿಯಲೇ ಬೇಕು’ ಎಂದರು.

ವಾಹನಗಳ ಸಂಚಾರ; ಲಾಕ್‌ಡೌನ್ ಸಮಯದಲ್ಲೂ ಹಲವು ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ಎಂ.ಜಿ.ರಸ್ತೆ, ಶಿವಾಜಿನಗರ, ಕೋರಮಂಗಲ, ಮಡಿವಾಳ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂತು.

ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇಷ್ಟಾದರೂ ಹಲವರು ವಾಹನಗಳಲ್ಲಿ ಸುತ್ತಾಡುತ್ತಿದ್ದಾರೆ. ಆಟೊ ಹಾಗೂ ಕ್ಯಾಬ್‌ಗಳು ಸಹ ಓಡಾಡುತ್ತಿವೆ.

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಹಾಗೂ ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ಅವರು ತಮ್ಮ ವ್ಯಾಪ್ತಿಯಲ್ಲಿ ಸಿಬ್ಬಂದಿ ಜೊತೆಯಲ್ಲಿ ವಾಹನಗಳ ತಪಾಸಣೆ ನಡೆಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ಆಟೊ, ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಸಿದರು. ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಿದರು.

ಹಲವರು ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದರು. ಅಂಥವರಿಗೂ ಸ್ಥಳದಲ್ಲೇ ದಂಡ ವಿಧಿಸಲಾಯಿತು.

‘ಲಾಠಿಯೇ ಪರಿಹಾರವಲ್ಲ’
ಲಾಕ್‌ಡೌನ್‌ ಜಾರಿಯಾದರೂ ಕೆಲವೆಡೆ ಜನ ಓಡಾಡುತ್ತಿದ್ದಾರೆ. ಬೆಂಗಳೂರು ದೊಡ್ಡ ನಗರ. ಇಲ್ಲಿ ಜನರ ಓಡಾಟ ಇದ್ದೇ ಇರುತ್ತದೆ. ಅವರೆಲ್ಲರನ್ನೂ ನಿಯಂತ್ರಿಸಲು ಲಾಠಿಯೇ ಪರಿಹಾರವಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.