ADVERTISEMENT

ಕೋವಿಡ್ ಎರಡನೇ ಅಲೆ: ಬೇಸಿಗೆಯಲ್ಲಿ ತಂಪು ನೀಡದ ಐಸ್‌ಕ್ರೀಂ

ವ್ಯಾಪಾರಿಗಳಿಗೆ ಬಾಡಿಗೆ ಕಟ್ಟುವ ತಲೆಬಿಸಿ

ಮನೋಹರ್ ಎಂ.
Published 29 ಮೇ 2021, 20:53 IST
Last Updated 29 ಮೇ 2021, 20:53 IST
ಲಾಕ್‌ಡೌನ್‌ನಿಂದಾಗಿ ಹನುಮಂತನಗರದಲ್ಲಿ ಐಸ್‌ ಕ್ರೀಂ ಮಳಿಗೆ ಮುಚ್ಚಿರುವುದು
ಲಾಕ್‌ಡೌನ್‌ನಿಂದಾಗಿ ಹನುಮಂತನಗರದಲ್ಲಿ ಐಸ್‌ ಕ್ರೀಂ ಮಳಿಗೆ ಮುಚ್ಚಿರುವುದು   

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆಯ ಹೊಡೆತಕ್ಕೆ ಐಸ್‌ಕ್ರೀಂ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಲಾಭ ತರುವ ಬೇಸಿಗೆ ಅವಧಿಯಲ್ಲೇ ಲಾಕ್‌ಡೌನ್‌ನಿಂದಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ’ಎಂದು ವ್ಯಾಪಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಐಸ್‌ ಕ್ರೀಂ ಅಂಗಡಿಗಳಲ್ಲಿ ಪಾರ್ಸೆಲ್‌ ನೀಡಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಗ್ರಾಹಕರ ಸಂಖ್ಯೆಇಳಿಮುಖವಾಗಿದ್ದರೂ ವ್ಯಾಪಾರಸಂಪೂರ್ಣ ನಿಂತಿರಲಿಲ್ಲ. ಇದರಿಂದ ವ್ಯಾಪಾರಿಗಳು ತುಸು ನಿಟ್ಟುಸಿರು ಬಿಟ್ಟಿದ್ದರು.

‘ಈ ಲಾಕ್‌ಡೌನ್‌ನಲ್ಲಿ ಪಾರ್ಸೆಲ್‌ಗೂ ಅವಕಾಶ ನೀಡಿಲ್ಲ.ಬೆಳಿಗ್ಗೆ 6ರಿಂದ10ರವರೆಗೆ ಐಸ್‌ ಕ್ರೀಂ ವ್ಯಾಪಾರನಡೆಯುವ ಸಮಯವೂ ಅಲ್ಲ.ಕಳೆದ ಬಾರಿಯಂತೆ ಈ ಸಲವೂ ನಷ್ಟ ತಪ್ಪುವುದಿಲ್ಲ’ ಎನ್ನುವುದು ವ್ಯಾಪಾರಿಗಳ ನೋವಿನ ಮಾತು.

ADVERTISEMENT

‘ಮಾರ್ಚ್‍ನಿಂದ ಆರಂಭವಾಗುವ ಬೇಸಿಗೆ ಧಗೆಯಿಂದ ಜನ ಐಸ್‍ ಕ್ರೀಂ ಸವಿಯಲು ಮುಗಿ ಬೀಳುತ್ತಿದ್ದರು. ಬೇಸಿಗೆ ರಜೆಗೆ ಮನೆಯಲ್ಲೇ ಇರುತ್ತಿದ್ದ ಮಕ್ಕಳು ಹಾಗೂ ಯುವಕರು ಐಸ್‍ ಕ್ರೀಂ ಸವಿಯಲು ಬರುತ್ತಿದ್ದರು. ಅಂಗಡಿಯೊಳಗೆ ಕೂರಲು ಜಾಗವೂ ಇರುತ್ತಿರಲಿಲ್ಲ. ಎರಡು ವರ್ಷದ ಬೇಸಿಗೆಯಲ್ಲೂ ವ್ಯಾಪಾರ ಕಾಣಲಿಲ್ಲ’ ಎಂದು ರಾಜಾಜಿನಗರದ ಜ್ಯೂಸ್ ಕಾರ್ನರ್ ಅಂಗಡಿ ಮಾಲೀಕ ನಿಶಾಂತ್ ಹೇಳಿದರು.

‘ಅಗತ್ಯ ಸೇವೆಯಡಿ ಐಸ್‌ ಕ್ರೀಂಗೂ ರಾಜ್ಯ ಸರ್ಕಾರಲಾಕ್‌ಡೌನ್‌ನಲ್ಲಿ ಅನುವು ಮಾಡಿಕೊಟ್ಟಿತ್ತು. ಈ ಬಾರಿಯ ನಿರ್ಬಂಧಗಳಿಂದ ಅಂಗಡಿ ಮುಚ್ಚಲಾಗಿದೆ. ಮದುವೆ, ಶುಭ ಸಮಾರಂಭಗಳೂ ನಡೆಯುತ್ತಿಲ್ಲ. ಹಾಗಾಗಿ, ಕಾರ್ಯಕ್ರಮಗಳ ಆರ್ಡರ್‌ಗಳೂ ಇಲ್ಲ’ ಎಂದು ನಾಗರಬಾವಿಯ ಐಸ್‌ಕ್ರೀಂ ಅಂಗಡಿ ಮಾಲೀಕ ಚಂದ್ರಶೇಖರ್ ತಿಳಿಸಿದರು.

‘ಐಸ್ ಕ್ರೀಂ ಸೇವನೆಯಿಂದ ಸೋಂಕು ಹರಡುತ್ತದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿತ್ತು. ಐಸ್‌ ಕ್ರೀಂನಿಂದ ಕೋವಿಡ್ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸ್ಪಷ್ಟನೆಯನ್ನು ಭಾರತೀಯ ಐಸ್ ಕ್ರೀಂ ತಯಾರಕರ ಸಂಘತನ್ನ ವೆಬ್‍ಸೈಟ್‍ನಲ್ಲೂ ಪ್ರಕಟಿಸಿದೆ. ಆದರೂ ಜನರಲ್ಲಿ ಭೀತಿ ಜೀವಂತವಾಗಿದೆ. ಐಸ್‌ಕ್ರೀಂ ತಣ್ಣನೆಯ ಉತ್ಪನ್ನವಾದರೂ ದೇಹದಲ್ಲಿ ತಾಪ ಹೆಚ್ಚಿಸುತ್ತದೆ. ಜನರಿಗೆ ವೈಜ್ಞಾನಿಕ ಅರಿವು ಅಗತ್ಯ’ ಎಂದರು.

ಗ್ರಾಹಕರಿಗೆ ಆನ್‌ಲೈನ್‌ ಸೇವೆ
‘ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಐಸ್‌ ಕ್ರೀಂ ಖರೀದಿಸಲುಗ್ರಾಹಕರು ಒಲವು ತೋರಿದರು. ಹಾಗಾಗಿ, ಡೆಲಿವರಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಆನ್‌ಲೈನ್‌ ಸೇವೆ ನೀಡುತ್ತಿದ್ದೇವೆ’ ಎಂದು ಬನಶಂಕರಿ ಮೂರನೇ ಹಂತದ ಕೆಇಬಿ ಬಡಾವಣೆಯ ಗೋ‍‍ಪಿ ಐಸ್‌ಕ್ರೀಂ ಮಳಿಗೆಯ ಸುಧೀಂದ್ರ ತಿಳಿಸಿದರು.

‘ಬೇಸಿಗೆಯ ಸಾಮಾನ್ಯ ದಿನಗಳಲ್ಲಿ ಒಂದು ದಿನಕ್ಕೆ ಗರಿಷ್ಠ 70 ಗ್ರಾಹಕರು ಬರುತ್ತಿದ್ದರು. ಈಗ ವಾರದ ದಿನಗಳಲ್ಲಿ 7 ಹಾಗೂ ವಾರಾಂತ್ಯದಲ್ಲಿ ಗರಿಷ್ಠ 15 ಮಂದಿಆನ್‌ಲೈನ್‌ ಮೂಲಕ ಐಸ್‌ ಕ್ರೀಂ ಖರೀದಿಸುತ್ತಿದ್ದಾರೆ. ಆದರೂ ಸರಿಯಾದ ವ್ಯಾಪಾರವಿಲ್ಲದೆ ಜೀವನ ಸಂಕಷ್ಟದಲ್ಲಿದೆ’ ಎಂದರು.

ಸರ್ಕಾರದ ನೆರವೂ ಇಲ್ಲ
‘ಐಸ್‌ ಕ್ರೀಂ ಮಳಿಗೆಗಳು ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತವೆ. ಕೋವಿಡ್‌ನಿಂದ ಮಳಿಗೆ ತೆರೆಯದಿದ್ದರೂ ಬಾಡಿಗೆ ಪಾವತಿಸಲೇಬೇಕು. ಐಸ್‌ ಕ್ರೀಂ ವ್ಯಾಪಾರಿಗಳಿಗೆ ಸರ್ಕಾರ ಯಾವುದೇ ಆರ್ಥಿಕ ನೆರವೂ ನೀಡಿಲ್ಲ’ ಎಂದುಶ್ರೀನಗರದಕೂಲ್ ಹಟ್ಸ್ಐಸ್‍ ಕ್ರೀಂ ಅಂಗಡಿ ಮಾಲೀಕರಾಮಮೂರ್ತಿ ಬೇಸರ ವ್ಯಕ್ತಪಡಿಸಿದರು.

‘ತಿಂಗಳ ಬಾಡಿಗೆ ₹15 ಸಾವಿರ ಹಾಗೂ ಐಸ್‌ ಕ್ರೀಂ ತಂಪಾಗಿ ಇಡುವ ಫ್ರಿಜ್‌ ನಿರ್ವಹಣೆಗೆ ತಿಂಗಳಿಗೆ ₹3 ಸಾವಿರ ವಿದ್ಯುತ್ ಬಿಲ್‌ ಕಟ್ಟಬೇಕು. ಬೇಸಿಗೆಯಲ್ಲಿ ಮಾತ್ರ ನಮ್ಮ ಜೀವನ ಸುಗಮ. ಈಗ ವ್ಯಾಪಾರ ಇಲ್ಲದಿದ್ದರೂ ಖರ್ಚು ನಿಂತಿಲ್ಲ. ಸರ್ಕಾರ ಐಸ್‌ಕ್ರೀಂ ವ್ಯಾಪಾರಿಗಳಿಗೆ ಬಾಡಿಗೆ ಹಾಗೂ ವಿದ್ಯುತ್ ಶುಲ್ಕವನ್ನಾದರೂ ಮನ್ನಾ ಮಾಡಬೇಕು’ ಎಂದೂ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.