ADVERTISEMENT

26 ಶವಗಳ ಸಾಮೂಹಿಕ ಅಂತ್ಯಕ್ರಿಯೆ

ತಾವರೆಕೆರೆ ಬಳಿ ಚಿತಾಗಾರದ ಬಳಿ ಶವಗಳ ಸಾಲು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 21:47 IST
Last Updated 30 ಏಪ್ರಿಲ್ 2021, 21:47 IST
ಚಾಮರಾಜಪೇಟೆಯಲ್ಲಿ ಸಾಮೂಹಿಕ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಿರುವುದು –ಪ್ರಜಾವಾಣಿ ಚಿತ್ರ
ಚಾಮರಾಜಪೇಟೆಯಲ್ಲಿ ಸಾಮೂಹಿಕ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು: ತಾವರೆಕೆರೆ ಬಳಿ ಹೊಸದಾಗಿ ಸಿದ್ಧಪಡಿಸಿರುವ ಚಿತಾಗಾರದಲ್ಲಿ ಈಗ ದೆಹಲಿ ಮಾದರಿಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಆರಂಭವಾಗಿದೆ. ಶುಕ್ರವಾರ ಏಕಕಾಲಕ್ಕೆ 26 ಶವಗಳನ್ನು ಸಂಸ್ಕಾರ ಮಾಡಲಾಯಿತು.

ನಗರದಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ರಾಜ್ಯ ಸರ್ಕಾರ ತಾವರೆಕೆರೆ ಬಳಿ ಹೊಸದಾಗಿ ಚಿತಾಗಾರ ಆರಂಭಿಸಿದೆ. ಈ ಚಿತಾಗಾರಕ್ಕೆ ಒಂದೇ ದಿನ 47 ಶವಗಳನ್ನು ಸುಡಲಾಗಿದೆ.

ಶುಕ್ರವಾರ ಇಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡುವ ಮೂಲಕ ಹೊರ ರಾಜ್ಯಗಳಲ್ಲಿ ನಡೆಯುತ್ತಿದ್ದ ಈ ರೀತಿಯ ಅಂತ್ಯಕ್ರಿಯೆ ಬೆಂಗಳೂರಿನಲ್ಲೂ ಆರಂಭವಾದಂತೆ ಆಗಿದೆ.

ADVERTISEMENT

4 ಗಂಟೆ ನಂತರ ಶವಗಳನ್ನು ಕಳುಹಿಸದಿರಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದರು. ‘ದಿನಕ್ಕೆ 70ರಿಂದ 80 ಶವಗಳು ಅಂತ್ಯಕ್ರಿಯೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ನಗರದಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಮಳೆಯಾಗುತ್ತಿರುವ ಕಾರಣ ಸಂಜೆ 4 ಗಂಟೆ ನಂತರ ಶವಗಳನ್ನು ಕಳುಹಿಸದಿರಲು ನಿರ್ಧರಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾವರೆಕೆರೆ ಗಿಡ್ಡೇನಹಳ್ಳಿ ಬಳಿ ಇನ್ನೂ ಒಂದು ಚಿತಾಗಾರ ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಮೊದಲೇ ದಿನ 25 ಶವಗಳ ಅಂತ್ಯಕ್ರಿಯೆ ಇಲ್ಲಿ ನಡೆದಿದೆ.

ಚಿತಾಗಾರಗಳ ಬಳಿ ಕಣ್ಣೀರ ಕೋಡಿ
ಚಿತಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಒಬ್ಬೊಬ್ಬರ ಕಣ್ಣೀರು ಒಂದೊಂದು ಕತೆ ಹೇಳುತ್ತಿವೆ.

ಕುರುಬರಹಳ್ಳಿಯ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು. ತಂದೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂಬ ಕಾರಣಕ್ಕೆ ಮಗ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಕಲ್ಲು ಹೃದಯದವರನ್ನೂ ಘಾಸಿ ಮಾಡುವಂತಿದ್ದವು.

‘ಹಾಸಿಗೆ ಒದಗಿಸಿ ಎಂದು ವೈದ್ಯರ ಕಾಲು ಹಿಡಿದುಕೊಂಡರೂ ಕೊಡಲಿಲ್ಲ. ಚಿಕಿತ್ಸೆ ಸಿಗದೆ ತಂದೆ ಮೃತಪಟ್ಟ ಬಳಿಕ ಬಿಬಿಎಂಪಿ ಅಧಿಕಾರಿಗಳು ಹಾಸಿಗೆ ಲಭ್ಯವಿದೆ ಎಂದು ಕರೆ ಮಾಡಿದರು. ಈಗ ಹಾಸಿಗೆ ತಗೆದುಕೊಂಡು ಏನು ಮಾಡಲಿ’ ಎಂದು ಅವರು ಕಣ್ಣೀರಿಟ್ಟರು.

ಅಂತ್ಯಕ್ರಿಯೆಗೆ ಹಾಜರಾಗಲು ಹಿಂದೇಟು
ಕೋವಿಡ್‌ ನಿಯಮಗಳನ್ನು ಅನುಸರಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸೋಂಕಿತರ ಕುಟುಂಬ ಸದಸ್ಯರು ಹಾಜರಾಗಲು ಅವಕಾಶ ನೀಡಿದ್ದರೂ, ಹಾಜರಾಗಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕರು ಆಂಬುಲೆನ್ಸ್ ಚಾಲಕರಿಗೆ ಎಲ್ಲ ಜವಾಬ್ದಾರಿ ವಹಿಸುತ್ತಿದ್ದಾರೆ.

‘ಕೋವಿಡ್‌ ಸೋಂಕಿಗೆ ಹೆದರಿ ಕುಟುಂಬ ಸದಸ್ಯರು ಶವ ಸಂಸ್ಕಾರಕ್ಕೆ ಹಾಜರಾಗುತ್ತಿಲ್ಲ. ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲೂ ಹೆದರುತ್ತಿದ್ದಾರೆ. ಆಂಬುಲೆನ್ಸ್ ಚಾಲಕರಿಗೇ ಪ್ಯಾಕೇಜ್ ನೀಡಿ ಮರುದಿನ ಚಿತಾಭಸ್ಮ ಪಡೆಯುತ್ತಿದ್ದಾರೆ’ ಎಂದು ಚಾಲಕರೊಬ್ಬರು ವಿವರಿಸಿದರು.

‘ಕಳೆದ ನಾಲ್ಕು ದಿನದಿಂದ ನಾನೇ ವಿಧಿವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.