ADVERTISEMENT

ಕೋವಿಡ್-19 | ಪರೀಕ್ಷಾ ಸಾಮರ್ಥ್ಯ 5 ಸಾವಿರಕ್ಕೆ ಏರಿಕೆ

26 ಪ್ರಯೋಗಾಲಯಗಳು ರಾಜ್ಯದಲ್ಲಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 22:21 IST
Last Updated 1 ಮೇ 2020, 22:21 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು:ಕೋವಿಡ್‌ ಪರೀಕ್ಷೆ ನಡೆಸಲು ರಾಜ್ಯದ ಮೂರು ಸರ್ಕಾರಿ ಪ್ರಯೋಗಾಲಯಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಇದರಿಂದಾಗಿ ಪ್ರಯೋಗಾಲಯಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ನಿತ್ಯ 5 ಸಾವಿರ ಮಂದಿಯ ರಕ್ತ ಹಾಗೂ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ.

ಸೋಂಕು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆಗೆ ಯಾವುದೇ ಪ್ರಯೋಗಾಲಯಗಳು ಇರಲಿಲ್ಲ. ಹಾಗಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ಸೋಂಕು ಶಂಕಿತರ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ಇದರಿಂದಾಗಿ ವರದಿಗಳು ಬರುವುದು ವಿಳಂಬವಾಗುತ್ತಿತ್ತು.

ಬಳಿಕ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎನ್‌ಐವಿ ಬೆಂಗಳೂರು ವಿಭಾಗಕ್ಕೆ ಕೇಂದ್ರ ಸರ್ಕಾರ ಕೋವಿಡ್ ಪರೀಕ್ಷೆಗೆ ಅನುಮೋದನೆ ನೀಡಿತು. ಇದರಿಂದಾಗಿ ರಾಜ್ಯದಲ್ಲಿ ನಿತ್ಯ 200 ರಿಂದ 300 ಮಂದಿಯ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ಜಿಲ್ಲಾ ಮಟ್ಟದಲ್ಲಿಯೂ ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಹೊಸದಾಗಿ ಗದಗ, ತುಮಕೂರು ಮತ್ತು ವಿಜಯಪುರದಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿಗೂ ಅನುಮೋದನೆ ದೊರೆತಿದೆ. ಇದರಿಂದಾಗಿ ಪರೀಕ್ಷೆಗಳ ಸಂಖ್ಯೆಯೂ ಹೆಚ್ಚಳವಾಗಲಿದೆ.

ADVERTISEMENT

ಕಡಿಮೆ ಅವಧಿಯಲ್ಲಿ ಹೆಚ್ಚು ಪರೀಕ್ಷೆ:ರಾಜ್ಯದಲ್ಲಿ ಸದ್ಯ ನಿತ್ಯ 3ರಿಂದ 4 ಸಾವಿರ ಮಂದಿಯ ರಕ್ತ ಹಾಗೂ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಜಿಲ್ಲಾ ಮಟ್ಟದಲ್ಲಿಯೂ ಪ್ರಯೋಗಾಲಯಗಳನ್ನು ಸ್ಥಾಪಿಸಿ, ಪರೀಕ್ಷೆಗಳನ್ನು ಹೆಚ್ಚಳ ಮಾಡುವಂತೆ ಸೂಚಿಸಿದೆ. ಇದರಿಂದಾಗಿ ಈ ತಿಂಗಳಾಂತ್ಯಕ್ಕೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಯೋಗಾಲಯಗಳು ಪ್ರಾರಂಭವಾಗುವ ಸಾಧ್ಯತೆಗಳಿವೆ. ಸದ್ಯ ರಾಜ್ಯದಲ್ಲಿ 18 ಸರ್ಕಾರಿ ಹಾಗೂ 8 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ.

‘ಸೋಂಕು ನಿವಾರಣೆಗೆ ರಾಜ್ಯದಲ್ಲಿ ‘ನಾಲ್ಕು ಟಿ’ಗಳ ಸೂತ್ರವನ್ನು(ಟ್ರೇಸ್, ಟ್ರ್ಯಾಕ್, ಟೆಸ್ಟ್ ಮತ್ತು ಟ್ರೀಟ್) ಅನುಸರಿಸಲಾಗುತ್ತಿದೆ. ಇದರಿಂದಾಗಿ ಕೋವಿಡ್‌ ನಿಯಂತ್ರಣ ಸಾಕಾರವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಾಲಯಗಳನ್ನು
ಹೊಂದುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

‘ತಿಂಗಳಾಂತ್ಯಕ್ಕೆ 27 ಪ್ರಯೋಗಾಲಯ’
‘ಮೇ ತಿಂಗಳ ಅಂತ್ಯದೊಳಗೆ ರಾಜ್ಯದಲ್ಲಿ 27 ಕೋವಿಡ್‌ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಪ್ರಯೋಗಾಲಯಗಳ ಸಂಖ್ಯೆ 60ಕ್ಕೆ ಏರಿಕೆ ಮಾಡಲಾಗುತ್ತದೆ’ ಎಂದು ಡಾ.ಕೆ. ಸುಧಾಕರ್ ಮಾಹಿತಿ ನೀಡಿದರು.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಎರಡು ಪ್ರಯೋಗಾಲಯಗಳನ್ನು ಹೊಂದುವುದು ಸರ್ಕಾರದ ಗುರಿಯಾಗಿದೆ. ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳವಾದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಅಧಿಕಗೊಳಿಸಿ, ಪ್ರಾರಂಭಿಕ ಹಂತದಲ್ಲಿಯೇ ಸೋಂಕು ಪತ್ತೆ ಮಾಡಬಹುದು. ಸೋಂಕು ಹರಡುವುದನ್ನು ತಡೆಯಲೂ ಸಹಕಾರಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.