ADVERTISEMENT

PV Web Exclusive | ಅಂತರ ಮರೆತ ಆಡಳಿತ ಯಂತ್ರ

ಪ್ರವೀಣ ಕುಮಾರ್ ಪಿ.ವಿ.
Published 2 ಸೆಪ್ಟೆಂಬರ್ 2020, 8:38 IST
Last Updated 2 ಸೆಪ್ಟೆಂಬರ್ 2020, 8:38 IST
ಬೆಂಗಳೂರಿನಲ್ಲಿ ಆನಂದ ರಾವ್‌ ವೃತ್ತದ ಬಳಿಯ ಮೇಲ್ಸೇತುವೆಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಹೆಸರು ಇಡುವ ಸಲುವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜನಜಂಗುಳಿ 
ಬೆಂಗಳೂರಿನಲ್ಲಿ ಆನಂದ ರಾವ್‌ ವೃತ್ತದ ಬಳಿಯ ಮೇಲ್ಸೇತುವೆಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಹೆಸರು ಇಡುವ ಸಲುವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜನಜಂಗುಳಿ    

ಬೆಂಗಳೂರು: ‘ ನಮಸ್ಕಾರ... ಕೋವಿಡ್‌ ಅನ್‌ಲಾಕ್‌ ಪ್ರಕ್ರಿಯೆ ಈಗ ಪೂರ್ತಿ ದೇಶದಲ್ಲಿ ಆರಂಭವಾಗಿದೆ. ಅತಿ ಅಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗಿ. ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ 2 ಗಜಗಳಷ್ಟು ಅಂತರ ಕಾಪಾಡಿಕೊಳ್ಳಿ...’

ಯಾರಿಗಾದರೂ ಫೋನ್‌ ಮಾಡಿದಾಗಲೆಲ್ಲಾ ಕಿವಿಗಪ್ಪಳಿಸುವ ಈ ಸಂದೇಶವನ್ನು ಕೇಳಿ ಕೇಳಿ ಜನ ರೋಸಿ ಹೋಗಿದ್ದಾರೆ. ಹಾಗಾದರೆ ಈ ಸಂದೇಶ ಜನ ಸಾಮಾನ್ಯರಿಗೆ ಮಾತ್ರ ಅನ್ವಯವೇ? ಸರ್ಕಾರದ ಆಡಳಿತ ಯಂತ್ರಗಳನ್ನು ನಡೆಸುವವರಿಗೆ ಇದು ಅನ್ವಯವಾಗುವುದಿಲ್ಲವೇ? ನಮ್ಮ ಜನ ಪ್ರತಿನಿಧಿಗಳು, ಕೋವಿಡ್‌ ನಿಯಂತ್ರಣಕ್ಕಾಗಿ ಇಂತಹ ನಿಯಮಗಳನ್ನು ರೂಪಿಸುವ ಅಧಿಕಾರಿ ವರ್ಗದವರಿಗೆ ಇದರಿಂದಲೇನಾದರೂ ವಿನಾಯಿತಿ ಇದೆಯೇ? ಸರ್ಕಾರದ ಆಡಳಿತ ಯಂತ್ರವೇ ಹಮ್ಮಿಕೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸೇರುತ್ತಿರುವ ಜನಜಂಗುಳಿ ಇಂತಹದ್ದೊಂದು ಸಂದೇಹವನ್ನು ಮೂಡಿಸುತ್ತಿವೆ.

ಬಿಬಿಎಂಪಿಯ ಈಗಿನ ಚುನಾಯಿತ ಕೌನ್ಸಿಲ್‌ನ ಅಧಿಕಾರಾವಧಿ ಸೆ.10ಕ್ಕೆ ಮುಕ್ತಾಯವಾಗಲಿದೆ. ಹಾಗಾಗಿ ಈಗ ಪ್ರತಿ ವಾರ್ಡ್‌ನಲ್ಲೂ ಉದ್ಘಾಟನಾ ಕಾರ್ಯಕ್ರಮಗಳದ್ದೇ ಭರಾಟೆ. ತಮ್ಮ ಅವಧಿಯಲ್ಲಿ ಆದ ಕಾಮಗಾರಿಗಳನ್ನು ಸೆ. 10ರೊಳಗೆ ಉದ್ಘಾಟಿಸಿ, ಜನರೆದುರು ತಮ್ಮ ಸಾಧನೆ ಬಿಂಬಿಸಿಕೊಳ್ಳುವ ಆತುರ ಪಾಲಿಕೆ ಸದಸ್ಯರಿಗೆ. ಕೋವಿಡ್‌ ನಿಯಂತ್ರಣದ ವಿಚಾರದಲ್ಲಿ ಇತರರಿಗೆ ಮಾದರಿಯಾಗಿ ನಡೆದುಕೊಳ್ಳಬೇಕಾದ ಕೆಲವು ಮಂತ್ರಿಗಳು, ಶಾಸಕರು, ಪಾಲಿಕೆ ಸದಸ್ಯರು ಅವರ ಚೇಲಾಗಳು ಹಾಗೂ ಅಧಿಕಾರಿಗಳು ಸಭೆ ಸಮಾರಂಭಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ.

ADVERTISEMENT

ಕೋವಿಡ್‌ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಈ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳನ್ನು ಹಮ್ಮಿಕೊಳ್ಳುವಂತಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿಯೇ ದಿನಕ್ಕೆ ನಾಲ್ಕೈದು ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಾವು ನೋಡುತ್ತಿದ್ದೇವೆ.

ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹೇಗೆ ಜನಜಂಗುಳಿಯನ್ನು ಸೃಷ್ಟಿಸುತ್ತಿವೆ ಎಂಬುದಕ್ಕೆ ಬೆಂಗಳೂರಿನಲ್ಲಿ ಇತ್ತೀಚೆಗೆ ಬಿಬಿಎಂಪಿ ವತಿಯಿಂದಲೇ ಏರ್ಪಡಿಸಿದ್ದ ಅಶ್ವಾರೂಢ ಬಸವೇಶ್ವರರ ಮರುವಿನ್ಯಾಸಗೊಂಡ ಪ್ರತಿಮೆಯ ಉದ್ಘಾಟನೆ, ಆನಂದ ರಾವ್‌ ವೃತ್ತದ ಮೇಲ್ಸೇತುವೆಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಅವರ ಹೆಸರಿಡುವ ಸಮಾರಂಭಗಳೇ ಸಾಕ್ಷಿ.

ತಮ್ಮ ಸಾಧನೆ ಬಿಂಬಿಸಿಕೊಳ್ಳಲು ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಿರುವ ಜನಪ್ರತಿನಿಧಿಗಳಿಗಂತೂ ನಾವೀಗ ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿದ್ದೇವೆ ಎಂಬ ಪರಿಜ್ಞಾನವೇ ಇಲ್ಲ. ಅವರ ಚೇಲಾಗಳಿಗಂತೂ ಅಂತರ ಕಾಯ್ದುಕೊಳ್ಳುವುದು ಎಂದರೆ ಏನೆಂದೇ ತಿಳಿದಿಲ್ಲ. ಇನ್ನೂ ಮನಸ್ಸಿಲ್ಲದಿದ್ದರೂ ಇಂತಹ ಕಾರ್ಯಕ್ರಮಗಳಲ್ಲಿ ಹಾಜರಾಗುವ ಧರ್ಮ ಸಂಕಟ ಅಧಿಕಾರಿಗಳದ್ದು.

‘ಮಂತ್ರಿ ಮಹೋದಯರನ್ನು,ಶಾಸಕರನ್ನು ಕರೆಸಿ ಉದ್ಘಾಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿದ್ದರೆ ಹೆಚ್ಚು ಜನ ಸೇರುವುದಕ್ಕೆ ಅವಕಾಶ ನೀಡಬಾರದು ಎಂದು ನಾವು ಸೂಚನೆ ನೀಡಿರುತ್ತೇವೆ. ಆದರೂ ಜನಪ್ರತಿನಿಧಿಗಳು ಇದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಹಾಗಾಗಿ ನಾವು ಮೂಕಪ್ರೇಕ್ಷಕರು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಈಗ ಮದುವೆ ಮತ್ತಿತರ ಶುಭಕಾರ್ಯ ನಡೆಸುವುದಕ್ಕೂ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಅದಕ್ಕಾಗಿ ನಾಲ್ಕೈದು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕು. 50ಕ್ಕಿಂತ ಹೆಚ್ಚು ಜನ ಸೇರಿಸಬಾರದು. ದೇಹದ ಉಷ್ಣಾಂಶ ತಪಾಸಣೆಗೆ ಹಾಗೂ ಜನ ಸ್ಯಾನಿಟೈಸರ್‌ ಬಳಸಿ ಕೈತೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು... ಎಂಬಿತ್ಯಾದಿ ಷರತ್ತು ವಿಧಿಸಿಯೇ ಇಂತಹ ಶುಭಕಾರ್ಯಗಳಿಗೆ ಅನುಮತಿ ನೀಡಲಾಗುತ್ತಿದೆ. ಆದರೆ, ಸರ್ಕಾರದ ಆಡಳಿತ ಯಂತ್ರಗಳೇ ಹಮ್ಮಿಕೊಳ್ಳುವ ಸಮಾರಂಭಗಳಲ್ಲಿ ಇಂತಹ ಯಾವುದೇ ಮುಂಜಾಗ್ರತಾ ವ್ಯವಸ್ಥೆಯೂ ಇರುವುದಿಲ್ಲ.

ಮಾಸ್ಕ್‌–ಮೂಗು–ಬಾಯಿಗಲ್ಲ; ಗಲ್ಲಕ್ಕೆ!

‘ಮಾಸ್ಕ್‌ ಧರಿಸುವಾಗ ಮೂಗು ಬಾಯಿಯನ್ನು ಸರಿಯಾಗಿ ಮುಚ್ಚಿ’ ಎಂಬ ಸಂದೇಶಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಜನಪ್ರತಿನಿಧಿಗಳು ಹಾಗೂ ಅವರ ಚೇಲಾಗಳು ವರ್ತಿಸುತ್ತಿದ್ದಾರೆ. ಹೆಚ್ಚಿನವರು ಮಾಸ್ಕನ್ನು ಧರಿಸುವುದು ಮೂಗು ಮತ್ತು ಬಾಯಿಗೆ ಅಲ್ಲ; ಗಲ್ಲಕ್ಕೆ! ನಾಯಕರ ಪಕ್ಕನಿಂತು ಫೋಟೊಗಳಿಗೆ ಪೋಸು ಕೊಡುವ ಹಾಗೂ ಸೆಲ್ಫಿ ತೆಗೆಸಿಕೊಳ್ಳುವ ಗೀಳಿಗೆ ನಿಯಂತ್ರಣ ಹಾಕಲು ಕೋವಿಡ್‌ನಿಂದಲೂ ಸಾಧ್ಯವಾಗಿಲ್ಲ. ಪರಸ್ಪರ ಅಂತರ ಕಾಯುವ ಪರಿವೆಯನ್ನೇ ಮರೆತು, ಮೈಗೆ ಮೈ ತಾಗಿಸಿ ನಿಂತು ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪರಿಪಾಠ ಈಗಲೂ ಮುಂದುವರಿದಿದೆ. ಮಾಸ್ಕ್‌ ಧರಿಸಿ ಸೆಲ್ಫಿ ತೆಗೆದಾಗ ತಮ್ಮ ಚಹರೆ ಕಾಣಿಸುವುದು ಬೇಡವೇ. ಹಾಗಾಗಿ ಮಾಸ್ಕ್‌ ಮುಖದಿಂದ ಸದ್ದಿಲ್ಲದೇ ಮರೆಗೆ ಸರಿಯುತ್ತದೆ!

ಬಡಪಾಯಿಗಳಿಗೆ ಮಾತ್ರ ದಂಡ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೇ ಅಡ್ಡಾಡುವವರು ಬಿಬಿಎಂಪಿ ಅಧಿಕಾರಿಗಳ ಅಥವಾ ಮಾರ್ಷಲ್‌ಗಳ ಕೈಗೆ ಸಿಕ್ಕಿಬಿದ್ದರೆ ₹ 200 ದಂಡ ತೆರಬೇಕು. ಈ ನಿಯಮ ಜಾರಿಗೆ ಬಂದಂದಿನಿಂದ ಆಗಸ್ಟ್‌ ಅಂತ್ಯದವರೆಗೆ 83 ಸಾವಿರ ಮಂದಿಗೆ ಒಟ್ಟು ₹ 1.6 ಕೋಟಿಗಳಷ್ಟು ದಂಡ ವಿಧಿಸಲಾಗಿದೆ. ಆದರೆ, ಸರ್ಕಾರಿ ಸಭೆ ಸಮಾರಂಭಗಳಲ್ಲಿ ಮಾಸ್ಕ್‌ ಧರಿಸದೇ ಇದ್ದವರಿಗೆ ದಂಡ ವಿಧಿಸಿದ ಒಂದೇ ಒಂದು ಉದಾಹರಣೆಯೂ ಇಲ್ಲ. ದಂಡದ ಅಸ್ತ್ರ ಪ್ರಭಾವಿಗಳಿಗೂ ಅನ್ವಯವಾಗುವುದು ಯಾವಾಗ? ಅಥವಾ ಅವರ ಮೂಲಕ ಕೋವಿಡ್‌ ಹರಡುವುದಿಲ್ಲವೇ ಎಂಬುದು ಯಕ್ಷ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.