ADVERTISEMENT

ಕೋವಿಡ್ ಲಸಿಕೆ ನಿಯಮ ಮಾರ್ಪಾಡು

ಗೊತ್ತುಪಡಿಸಿದ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಲು ಬಾರದಿದ್ದರೆ ಅನ್ಯರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 17:55 IST
Last Updated 23 ಜನವರಿ 2021, 17:55 IST
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳ ಜತೆ ಶನಿವಾರ ಏರ್ಪಡಿಸಿದ್ದ ಆನ್‌ಲೈನ್‌ ಸಂವಾದದಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿದರು. ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ಬಿ.ಕೆ.ವಿಜಯೇಂದ್ರ ಹಾಗೂ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್‌ ಇದ್ದಾರೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳ ಜತೆ ಶನಿವಾರ ಏರ್ಪಡಿಸಿದ್ದ ಆನ್‌ಲೈನ್‌ ಸಂವಾದದಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿದರು. ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ಬಿ.ಕೆ.ವಿಜಯೇಂದ್ರ ಹಾಗೂ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್‌ ಇದ್ದಾರೆ.   

ಬೆಂಗಳೂರು: ‘ಖಾಸಗಿ ಆಸ್ಪತ್ರೆಗಳ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಿರ್ದಿಷ್ಟ ದಿನದಂದು ಲಸಿಕೆ ಪಡೆಯಲು ಗೊತ್ತುಪಡಿಸಿರುವ 100 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಕೆಲವರು ಬಾರದಿದ್ದರೆ, ಬೇರೆಯವರಿಗೆ ಲಸಿಕೆ ನೀಡಲು ಅವಕಾಶ ನೀಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

ಲಸಿಕೆ ಪಡೆಯುವವರ ಪಟ್ಟಿಯಲ್ಲಿರುವ 100 ಜನರನ್ನು ಬಿಟ್ಟರೆ ಬೇರೆಯವರು ಲಸಿಕೆ ಪಡೆಯಲು ಇದುವರೆಗೆ ಅವಕಾಶ ಇರಲಿಲ್ಲ.

‘ಮೊದಲೇ ಗೊತ್ತುಪಡಿಸಿದ 100 ಮಂದಿಯಲ್ಲಿ ಕೆಲವು ಆರೋಗ್ಯ ಕಾರ್ಯಕರ್ತರು ಲಸಿಕಾ ಕೇಂದ್ರಕ್ಕೆ ಹಾಜರಾಗುತ್ತಿಲ್ಲ. ಅಂತಹವರ ಬದಲು ಈ ಹಿಂದೆಯೇ ನೊಂದಾಯಿಸಿಕೊಂಡ ಅನ್ಯರಿಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ತಂತ್ರಾಂಶದಲ್ಲೂ ಮಾರ್ಪಡುಗಳನ್ನು ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಅಧಿಕಾರಿಗಳು ಈ ಬದಲಾವಣೆಯನ್ನು ಗಮನಿಸಬೇಕು’ ಎಂದು ತಿಳಿಸಿದರು.

ADVERTISEMENT

ಕೋವಿಡ್‌ ಲಸಿಕೆ ನಿಯಮ ಬದಲಾವಣೆ ಸಂಬಂಧ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜಿನ ಅಧಿಕಾರಿಗಳ ಜೊತೆ ಆಯುಕ್ತರು ಶನಿವಾರ ಆನ್‌ಲೈನ್‌ ಸಂವಾದ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಂಜುನಾಥ ಪ್ರಸಾದ್, ‘ಆರು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 33,800 ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನೂ 1.45 ಲಕ್ಷ ಜನರಿಗೆ ಲಸಿಕೆ ನೀಡಬೇಕಿದೆ. ಶನಿವಾರ 107 ಕೇಂದ್ರಗಳಲ್ಲಿ 10 ಸಾವಿರ ಮಂದಿ ಲಸಿಕೆ ಪಡೆದಿದ್ದಾರೆ. ಭಾನುವಾರವೂ ಇಷ್ಟೇ ಮಂದಿಗೆ ಲಸಿಕೆ ನೀಡಲಾಗುವುದು’ ಎಂದು ಮಹಿತಿ ನೀಡಿದರು.

‘ಈವರೆಗೆ ನೋಂದಣಿ ಆಗದ ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಕೊಳ್ಳಲು ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ನೋಂದಾಣಿಯಾಗಿಯೂ ಲಸಿಕಾ ಕೇಂದ್ರಕ್ಕೆ ಹಾಜರಾಗದಿದ್ದರೆ, ಎರಡನೇ ಅವಕಾಶ ನೀಡಲಾಗುತ್ತದೆ. ಎರಡನೇ ಅವಕಾಶದಲ್ಲೂ ಲಸಿಕೆ ಪಡೆಯುವಲ್ಲಿ ವಿಫಲರಾದವರಿಗೆ ಸದ್ಯಕ್ಕೆ ಮೂರನೇ ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೋವಿಡ್ ಪರೀಕ್ಷೆ ಕಡಿಮೆ ಮಾಡಿಲ್ಲ’

ಕೋವಿಡ್ ಲಸಿಕೆ ನೀಡಲಾಗುತ್ತಿದೆ ಅಥವಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಪರೀಕ್ಷೆ ಕಡಿಮೆ ಮಾಡಿಲ್ಲ ಎಂದು ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದರು.

‘ದಿನಕ್ಕೆ 6 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದ ಸಂದರ್ಭದಲ್ಲಿ 60 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಈ ಶುಕ್ರವಾರ 93 ಪ್ರಕರಣ ಮಾತ್ರ ವರದಿಯಾಗಿದೆ. ಆದರೂ, 38 ಸಾವಿರ ಜನರ ಪರೀಕ್ಷೆ ಮಾಡಲಾಗಿದೆ’ ಎಂದು ವಿವರಿಸಿದರು.

ಬ್ರಿಟನ್‌ನಿಂದ ಬಂದು ಪರೀಕ್ಷೆ ಮಾಡಿಸಿಕೊಳ್ಳದವರ ವಿಳಾಸವನ್ನು ಪೊಲೀಸರಿಗೆ ನೀಡಲಾಗಿದೆ ಎಂದೂ ತಿಳಿಸಿದರು.

‘ಲಸಿಕೆ ಅಭಿಯಾನ–ಫೆಬ್ರುವರಿಯಲ್ಲಿ 2ನೇ ಹಂತ’

‘ಎರಡನೇ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಫೆಬ್ರುವರಿ ಎರಡನೇ ವಾರದಲ್ಲಿ ಮತ್ತೊಂದು ಸುತ್ತಿನ ಲಸಿಕೆ ಅಭಿಯಾನ ಆರಂಭಿಸುವ ಸಾಧ್ಯತೆ ಇದೆ’ ಎಂದು ಆಯುಕ್ತರು ತಿಳಿಸಿದರು.

‘ಜ.26 ಮತ್ತು 27ರಂದು ಲಸಿಕೆ ನೀಡಲಾಗುವುದಿಲ್ಲ. ಮೊದಲ ಹಂತದ ಪ್ರಕ್ರಿಯೆಗಳು ಮುಂದಿನ ವಾರದಲ್ಲಿ ಮುಗಿಯಲಿವೆ. ಆ ನಂತರ ಎರಡನೇ ಹಂತದಲ್ಲಿ ಲಸಿಕೆ ನೀಡುವ ದಿನಾಂಕಗಳನ್ನು ನಿಗದಿಪಡಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.