ADVERTISEMENT

ಮನೆಯಿಂದ ಕೆಲಸ ಮಾಡಲು ಅವಕಾಶ ಕೋರಿದ ತಹಶೀಲ್ದಾರ್‌ಗಳು

ಕೋವಿಡ್ ಆರೈಕೆ ಕೇಂದ್ರಗಳಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 21:11 IST
Last Updated 11 ಆಗಸ್ಟ್ 2020, 21:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ನೋಡಲ್‌ ಅಧಿಕಾರಿಗಳಾಗಿ ನೇಮಕಗೊಂಡಿರುವ ಎಂಟು ಮಂದಿ ಪ್ರೊಬೇಷನರಿ ತಹಶೀಲ್ದಾರ್‌ಗಳು ರಾತ್ರಿ ಪಾಳಿಯ ಕರ್ತವ್ಯ ನಿರ್ವಹಣೆಯನ್ನುಮನೆಯಿಂದಲೇ ಮಾಡಲು ಅವಕಾಶ ಕೋರಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಕೋವಿಡ್‌ ಅರೈಕೆ ಕೇಂದ್ರಗಳಲ್ಲಿ ವೈರಾಣುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಈ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಶುಶ್ರೂಷಕರು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ನೀಡಲಾಗುತ್ತದೆ. ಅವರಿಗೆ 15 ದಿನ ‍ಕ್ವಾರಂಟೈನ್‌ಗೆ ಒಳಗಾಗಲು ಅನುವು ಮಾಡಿಕೊಡಲಾಗುತ್ತದೆ. ಆದರೆ ನಮಗೆ ಈ ಸೌಲಭ್ಯಗಳಿಲ್ಲ. ‘ನಾವು ಕಾರ್ಯ ನಿರ್ವಹಿಸುವ ಸ್ಥಳಗಳಿಗೆ ನೀವು ಬರಬೇಡಿ’ ಎಂದು ವೈದ್ಯರು ನಮಗೆ ಹೇಳುತ್ತಿದ್ದಾರೆ. ನಮ್ಮ ಮನೆಗಳಲ್ಲೂ ವಯಸ್ಸಾದ ತಂದೆ ತಾಯಿ ಇದ್ದು, ಅವರೂ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ನಾವು ಸದಾ ಕುಟುಂಬದವರ ಬಗ್ಗೆ ಚಿಂತಿಸುತ್ತಾ ಮಾನಸಿಕ ಒತ್ತಡದಲ್ಲೇ ಕೆಲಸ ಮಾಡಬೇಕಾಗಿದೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕ್ಷೀಣಿಸುತ್ತಿದೆ’ ಎಂದು ಈ ನೋಡಲ್‌ ಅಧಿಕಾರಿಗಳು ಪತ್ರದಲ್ಲಿ ವಿವರಿಸಿದ್ದಾರೆ.

‘ಕೋವಿಡ್‌ ಆರೈಕೆ ಕೇಂದ್ರಗಳ ಕಾರ್ಯಪಡೆಯ ಮುಖ್ಯಸ್ಥರು ಪದೇ ಪದೇ ಕರೆ ಮಾಡಿ ಅವಾಚ್ಯವಾಗಿ ಬೈಯ್ಯುತ್ತಾರೆ. ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಹಾಗೂ ಅಮಾನತು ಮಾಡುವುದಾಗಿಯೂ ಬೆದರಿಕೆ ಒಡ್ಡುತ್ತಿದ್ದಾರೆ. ಮಹಿಳಾ ಅಧಿಕಾರಿಗಳ ಜೊತೆಗೆ ದುರ್ವರ್ತನೆ ಇನ್ನೊಂದು ಆತಂಕದ ವಿಷಯ. ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ನಮ್ಮ ಮೇಲಿನ ಅಪನಂಬಿಕೆಯಿಂದಾಗಿ, ಕೆಲಸದ ಸ್ಥಳದಿಂದ ಸೆಲ್ಫಿ ಕಳುಹಿಸುವಂತೆ ಪದೇ ಪದೇ ಹೇಳಲಾಗುತ್ತಿದೆ’ ಎಂದೂ ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ರಾತ್ರಿ ವೇಳೆ ಎಷ್ಟು ಹೊತ್ತಿಗೆ ಕರೆ ಬಂದರೂ ನಾವು ಸ್ವೀಕರಿಸಲು ಸಿದ್ಧರಿದ್ದೇವೆ. ಆದರೆ, ನಮಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡಿ’ ಎಂದು ನೋಡಲ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.