ADVERTISEMENT

ಬೆಂಗಳೂರಿನಲ್ಲಿ ಶೂನ್ಯಕ್ಕಿಳಿದ ಕೋವಿಡ್ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 1:15 IST
Last Updated 24 ಆಗಸ್ಟ್ 2021, 1:15 IST
   

ಬೆಂಗಳೂರು: ಬಹಳ ದಿನಗಳ ನಂತರ ಬೆಂಗಳೂರು ನಗರದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ ಸೋಮವಾರ ಶೂನ್ಯಕ್ಕೆ ಇಳಿದಿದೆ. ಕೋವಿಡ್‌ನಿಂದ ಸಾವು ದರವೂ ಶೇ 0.83ಕ್ಕೆ ಇಳಿಕೆಯಾಗಿದೆ.

2021ರ ಏಪ್ರಿಲ್‌ ಆರಂಭದಲ್ಲಿ ಕೋವಿಡ್‌ನಿಂದ ಸತ್ತವರ ದರವು ಶೇ 0.37ಕ್ಕೆ ಇಳಿಕೆಯಾಗಿತ್ತು. ಆದರೆ, ಎರಡನೇ ಅಲೆಯಲ್ಲಿ ಈ ರೋಗದಿಂದ ಸಾಯುತ್ತಿರುವವರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿತ್ತು. ಜೂನ್‌ ತಿಂಗಳ ಆರಂಭದಲ್ಲಂತೂ ಪ್ರತಿ 100 ಮಂದಿ ಸೋಂಕಿತರಲ್ಲಿ ಏಳಕ್ಕೂ ಅಧಿಕ ಮಂದಿ ಸತ್ತಿದ್ದರು. ಕೋವಿಡ್‌ ಸಾವಿನ ದರ ಶೇ 7.41ಕ್ಕೆ ಏರಿಕೆಯಾಗಿತ್ತು. ಮೃತರ ಅಂತ್ಯಕ್ರಿಯೆಗೆ ಸ್ಮಶಾನದಲ್ಲಿ ದಿನವಿಡೀ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಕ್ರಮೇಣ ಕೊರೊನಾ ಸೋಂಕು ಪತ್ತೆ ಪ್ರಮಾಣ ಕಡಿಮೆಯಾಗಿದ್ದು, ಪ್ರಸ್ತುತ 0.52ಕ್ಕೆ ಇಳಿಕೆ ಆಗಿದೆ. ಕೋವಿಡ್‌ನಿಂದ ಸಾವಿನ ದರವೂ ಕಡಿಮೆಯಾಗಿದೆ. ನಗರದಲ್ಲಿ ಇದುವರೆಗೆ ಒಟ್ಟು 15,960 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ. ರೋಗದಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ 98.09ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳುತ್ತಿವೆ.

ADVERTISEMENT

ಹಾಸಿಗೆಗಳು ಖಾಲಿ ಖಾಲಿ:

ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ರೋಗಿಗಳ ಸಂಖ್ಯೆ 190ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) 16 ಹಾಗೂ ವೆಂಟಿಲೇಟರ್‌ ಸೌಲಭ್ಯವಿರುವ ಐಸಿಯುಗಳಲ್ಲಿ 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಕೋಟಾದ ಚಿಕಿತ್ಸೆಗೆ ಈಗಲೂ 2,086 ಹಾಸಿಗೆಗಳನ್ನು ಬಿಬಿಎಂಪಿ ಹೊಂದಿದೆ. ಅವುಗಳಲ್ಲಿ 1896 ಹಾಸಿಗೆಗಳು ಖಾಲಿ ಇವೆ. ಸಾಮಾನ್ಯ ಐಸಿಯುಗಳಲ್ಲಿ 102 ಹಾಗೂ ವೆಂಟಿಲೇಟರ್‌ ಸೌಲಭ್ಯ ಹೊಂದಿರುವ ಐಸಿಯುಗಳಲ್ಲಿ 187 ಹಾಸಿಗೆಗಳು ಖಾಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.