ADVERTISEMENT

‘ಕೋವಿಡ್ ಆಸ್ಪತ್ರೆ: ಕುಂದುಕೊರತೆ ದಾಖಲಿಸಲು ಅವಕಾಶ ಖಚಿತಪಡಿಸಿ’

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 21:10 IST
Last Updated 29 ಸೆಪ್ಟೆಂಬರ್ 2020, 21:10 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು:ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕುಂದುಕೊರತೆಗಳನ್ನು ದಾಖಲಿಸಲು ಸರಿಯಾದ ಕಾರ್ಯವಿಧಾನ ಇದೆಯೇ ಎಂಬುದನ್ನುಖಚಿತಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಬೆಂಗಳೂರು ನಗರ ಜಿಲ್ಲಾ ಮೇಲ್ವಿಚಾರಣಾ ಸಮಿತಿ(ಬಿಬಿಎಂಪಿ ಸಮಿತಿ) ಅಸ್ತಿತ್ವದಲ್ಲಿಲ್ಲ ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಆಸ್ಪತ್ರೆಗಳಿಗೆ ಭೇಟಿ ನೀಡಿರುವ ಕುರಿತ ದಾಖಲೆ ಸಹಿತ ಅಲ್ಲಿ ಉಪಕರಣಗಳು ಮತ್ತು ಸೌಲಭ್ಯಗಳ ಲಭ್ಯತೆ ಕುರಿತು ವರದಿ ಸಲ್ಲಿಸಬೇಕು’ ಎಂದು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿತು.

ಕೋವಿಡ್ ಆಸ್ಪತ್ರೆಗಳ ಮೇಲ್ವಿಚಾರಣೆಗೆ ರಚಿಸಲಾಗಿರುವರಾಜ್ಯ ಮಟ್ಟದ ತಜ್ಞರ ಸಮಿತಿ ಸಲ್ಲಿಸಿದ್ದ ವರದಿ ಪರಿಶೀಲಿಸಿದ ಪೀಠ, ‘ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಜಿಲ್ಲಾ ಸಮಿತಿಗಳು ಸಂಗ್ರಹಿಸಿರುವ ಮಾಹಿತಿ ಸರಿಯಾಗಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ADVERTISEMENT

‘ನಿಯಮಿತವಾಗಿ ತಪಾಸಣೆ ಮಾಡುವುದರ ಉದ್ದೇಶ ವೈದ್ಯರ ದೋಷ ಕಂಡುಹಿಡಿಯುವುದಲ್ಲ. ಆಸ್ಪತ್ರೆಗಳು ಉತ್ತಮವಾಗಿ ಸಜ್ಜುಗೊಂಡಿವೆಯೇ ಎಂಬುದನ್ನು ಖಚಿತಪಡಿಸುವುದು ಮತ್ತು ಸೋಂಕಿತರು ತಮ್ಮ ಕುಂದುಕೊರತೆ ದಾಖಲಿಸುವ ಸ್ಥಿತಿ ಇದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ’ ಎಂದು ಪೀಠ ಹೇಳಿತು.

‘ಆಮ್ಲಜನಕ ‌ಸಿಲಿಂಡರ್‌ಗಳು ಎಲ್ಲಾ ಆಸ್ಪತ್ರೆಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಮನಾಗಿ ವಿತರಣೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.