ADVERTISEMENT

ಕೊರೊನಾ: ಔಷಧಿಗಳ ಪೂರೈಕೆಯಲ್ಲಿ ವ್ಯತ್ಯಯ

ಒಂದು ವಾರಕ್ಕೆ ಸಾಕಾಗುವಷ್ಟು ಔಷಧಿಗಳು ಮಾತ್ರ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:06 IST
Last Updated 29 ಮಾರ್ಚ್ 2020, 20:06 IST
ಮಲ್ಲೇಶ್ವರದ ಔಷಧಿ ಮಳಿಗೆಯೊಂದರಲ್ಲಿ ಜನತೆ ಔಷಧಿಗಳನ್ನು ಖರೀದಿಸುತ್ತಿರುವುದು – ಪ್ರಜಾವಾಣಿ ಚಿತ್ರ
ಮಲ್ಲೇಶ್ವರದ ಔಷಧಿ ಮಳಿಗೆಯೊಂದರಲ್ಲಿ ಜನತೆ ಔಷಧಿಗಳನ್ನು ಖರೀದಿಸುತ್ತಿರುವುದು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಔಷಧಿಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಬಹುತೇಕ ಔಷಧಿ ಮಳಿಗೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಉಂಟಾಗುವ ಆತಂಕ ಎದುರಾಗಿದೆ.

ರಾಜ್ಯದ ಗಡಿಗಳನ್ನು ಬಂದ್ ಮಾಡಲಾಗಿದ್ದರೂ ಆ್ಯಂಬುಲೆನ್ಸ್, ಔಷಧಿ ಪೂರೈಕೆ ವಾಹನಗಳ ಪ್ರವೇಶಕ್ಕೆ ಅಡ್ಡಿಯಿಲ್ಲ. ಆದರೆ,ಕಚ್ಚಾ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಔಷಧಿಗಳ ತಯಾರಿಕೆಯಲ್ಲಿ ಅರ್ಧದಷ್ಟು ಕುಸಿತವಾಗಿದೆ. ಇನ್ನೊಂದೆಡೆ, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗೆ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳುವವರು ಆತಂಕದಿಂದ ಅಧಿಕ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ.

31 ಔಷಧಿ ತಯಾರಕರು ಔಷಧಿಗಳ ಪೂರೈಕೆಗೆ ಇಲ್ಲಿನ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ವಿದೇಶದಿಂದ ಬರುವ ಕಚ್ಚಾ ಪದಾರ್ಥಗಳು ಸ್ಥಗಿತವಾಗಿರುವುದರಿಂದ ಔಷಧಿಗಳ ಉತ್ಪಾದನೆ ಇಳಿಕೆಯಾಗಿದೆ. ಆಸ್ತಮಾ, ನೋವು ನಿವಾರಕ ಔಷಧಿ, ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳಿಗೆ ಕಚ್ಚಾ ಪದಾರ್ಥಗಳ ಕೊರತೆ ಎದುರಾಗಿದೆ.

ADVERTISEMENT

ಪೂರೈಕೆದಾರರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎನ್ನುವುದು ಔಷಧಿ ಮಳಿಗೆಗಳ ಮಾಲೀಕರ ಅಳಲಾಗಿದೆ.ಡಯಾಬಿಟ್‌ ಒನ್, ಮೆಟ್ಫಾರ್ಮಿನ್,ಇಂಡಪಮೈಡ್,ಅಮ್ಲೋಡಿಪೈನ್ ಸೇರಿದಂತೆ ವಿವಿಧ ಔಷಧಗಳು ವಾರಕ್ಕೆ ಸಾಕಾಗುವಷ್ಟು ಮಾತ್ರ ದಾಸ್ತಾನು ಇದೆ.

ಗ್ರಾಹಕರಲ್ಲಿ ಮನವಿ: ‘ಔಷಧಿಗಳ ಖರೀದಿಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಅಷ್ಟಾಗಿ ವ್ಯತ್ಯಾಸ ಕಂಡುಬಂದಿಲ್ಲ. ಒಂದು ವಾರಕ್ಕೆ ಸಾಕಾಗುವಷ್ಟು ಔಷಧಿಗಳು ನಮ್ಮಲ್ಲಿ ಲಭ್ಯವಿದೆ. ಕೆಲ ಕ್ಲಿನಿಕ್‌ಗಳನ್ನು ಮುಚ್ಚಲಾಗಿರುವ ಪರಿಣಾಮ ಅನಾರೋಗ್ಯಕ್ಕೆ ಒಳಗಾದವರು ಮನೆಯಲ್ಲಿಯೇ ಔಷಧಿ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ವಾರ ಔಷಧಿಗಳು ಪೂರೈಕೆಯಾಗದಿದ್ದಲ್ಲಿ ಸಮಸ್ಯೆಯಾಗುತ್ತದೆ’ ಎಂದು ಕತ್ರಿಗುಪ್ಪೆಯ ಕೆ.ಇ.ಬಿ ರಸ್ತೆಯಲ್ಲಿರುವ ಶ್ರೀ ಮೆಡಿಕಲ್ಸ್ ಮಾಲೀಕ ಸುಧಾಕರ್ ತಿಳಿಸಿದರು.

*
ಔಷಧಿಗಳ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಸದ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಔಷಧಿಗಳ ದಾಸ್ತಾನು ಇದೆ. ಜನತೆ ಆತಂಕಪಡಬೇಕಿಲ್ಲ‌
-ಓಂ ಪ್ರಕಾಶ್ ಪಾಟೀಲ್, ಆರೋಗ್ಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.