ADVERTISEMENT

ಕೋವಿಡ್: ಒಂದೂವರೆ ಗಂಟೆಯಲ್ಲಿ ಫಲಿತಾಂಶ

ಈಕ್ವಿನ್ ಬಯೋಟೆಕ್ ಸಂಸ್ಥೆಯಿಂದ ‘ಗ್ಲೋಬಲ್ ಕೋವಿಡ್‌–19 ಆರ್‌ಟಿ–ಪಿಸಿಆರ್‌ ಕಿಟ್’ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 19:39 IST
Last Updated 27 ಸೆಪ್ಟೆಂಬರ್ 2020, 19:39 IST
   

ಬೆಂಗಳೂರು: ಕೇವಲ ಒಂದೂವರೆ ಗಂಟೆಯಲ್ಲಿ ಕೋವಿಡ್‌ ಪರೀಕ್ಷೆಯ ಫಲಿತಾಂಶ ನೀಡುವ ಆರ್‌ಟಿ–ಪಿಸಿಆರ್‌ ಕಿಟ್‌ಗಳನ್ನು ನಗರದ ನವೋದ್ಯಮ ಈಕ್ವಿನ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ ಬೆನ್ನಲ್ಲಿಯೇ ಪರೀಕ್ಷೆಗಳ ಸಂಖ್ಯೆ ಕೂಡ ಹೆಚ್ಚಳ ಕಂಡಿದೆ. ನಿಖರವಾದ ಫಲಿತಾಂಶವನ್ನು ನೀಡುವ ಆರ್‌ಟಿ–‍ಪಿಸಿಆರ್ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶಗಳನ್ನು ನೀಡಲು ಕನಿಷ್ಠ 4ರಿಂದ 8 ಗಂಟೆಗಳು ಬೇಕಾಗುತ್ತವೆ. ಹೀಗಾಗಿಯೇ ಅಧಿಕ ಸಂಖ್ಯೆಯಲ್ಲಿ ಆ್ಯಂಟಿಜೆನ್ ಪರೀಕ್ಷೆ ಮಾಡಲಾಗುತ್ತಿದೆ. ಈಕ್ವಿನ್ ಬಯೋಟೆಕ್ ಸಂಸ್ಥೆಯು ‘ಗ್ಲೋಬಲ್ ಕೋವಿಡ್‌–19 ಆರ್‌ಟಿ–ಪಿಸಿಆರ್‌ ಕಿಟ್’‌ ಅಲ್ಪಾವಧಿಯಲ್ಲಿಯೇ ಫಲಿತಾಂಶ ನೀಡಲಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ)ಇನ್‌ಕ್ಯೂಬೇಷನ್ ಕೇಂದ್ರದ ನೆರವನ್ನು ಸಂಸ್ಥೆಯು ಪಡೆದುಕೊಂಡಿದೆ.

ಸಂಸ್ಥೆಯು ಅಭಿವೃದ್ಧಿಪಡಿಸಿರುವ ಪರೀಕ್ಷಾ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದನೆ ನೀಡಿದೆ. ಈ ಕಿಟ್‌ಗಳನ್ನು ದೇಶದ ವಿವಿಧೆಡೆ ಪೂರೈಕೆ ಮಾಡಲು ಸಂಸ್ಥೆ ನಿರ್ಧರಿಸಿದೆ.

ADVERTISEMENT

‘ಸದ್ಯ ಬಳಕೆಯಲ್ಲಿರುವ ಆರ್‌ಟಿ–ಪಿಸಿಆರ್‌ ಕಿಟ್‌ಗಳು ಫಲಿತಾಂಶ ನೀಡಲು ಅಧಿಕ ಸಮಯವನ್ನು ತೆಗೆದುಕೊಳ್ಳುತ್ತಿವೆ. ನಾವು ಅಭಿವೃದ್ಧಿಪಡಿಸಿರುವ ಕಿಟ್‌ಗಳು ಅಲ್ಪಾವಧಿಯಲ್ಲಿಯೇ ಶೇ 100ರಷ್ಟು ನಿಖರ ಫಲಿತಾಂಶವನ್ನು ನೀಡುತ್ತದೆ. ಪರೀಕ್ಷಾ ಕಿಟ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಅದರ ದರವೂ ಅಧಿಕ. ನಾವು ಇಲ್ಲೇ ತಯಾರಿಸುವುದರಿಂದ ಕಿಟ್‌ಗಳನ್ನು ಕಡಿಮೆ ದರದಲ್ಲಿ ಪೂರೈಸಬಹುದು. ಇದರಿಂದ ಪರೀಕ್ಷೆ ವೆಚ್ಚವೂ ಕಡಿಮೆಯಾಗಲಿದೆ’ ಎಂದು ಐಐಎಸ್‌ಸಿಯ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕ ಹಾಗೂ ಈಕ್ವಿನ್ ಬಯೋಟೆಕ್‌ ಸಂಸ್ಥಾಪಕ ಉತ್ಪಾಲ್ ಟಾಟು ತಿಳಿಸಿದ್ದಾರೆ.

‘ಕಿಟ್‌ಗಳನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸಿ, ಮಾರುಕಟ್ಟೆಗೆ ತರಲು ಕಂಪನಿಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.