ADVERTISEMENT

ಐಎಲ್‌ಐ, ಸಾರಿ ಸಮಸ್ಯೆಗೆ ಕೋವಿಡ್ ಪರೀಕ್ಷೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 17:19 IST
Last Updated 3 ಅಕ್ಟೋಬರ್ 2020, 17:19 IST
   

ಬೆಂಗಳೂರು: ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎದುರಿಸುತ್ತಿರುವವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ಈ ಸಂಬಂಧ ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ. ಐಎಲ್‌ಐ ಹಾಗೂ ಸಾರಿ ಸಮಸ್ಯೆ ಎದುರಿಸುತ್ತಿರುವವರಿಗೆ ಕೋವಿಡ್ ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಈ ರೀತಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದವರಿಗೆ ಖಾಸಗಿ ಆಸ್ಪತ್ರೆಗಳು ಕೋವಿಡ್ ಪರೀಕ್ಷೆ ನಡೆಸದಿರುವುದು ಹಾಗೂ ಸರ್ಕಾರದ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸದಿರುವುದು ಗಮನಕ್ಕೆ ಬಂದಿದೆ. ಇದರಿಂದ ಕೋವಿಡ್ ಪ್ರಕರಣಗಳು ತಡವಾಗಿ ವರದಿಯಾಗಿ, ಮರಣಗಳು ಸಂಭವಿಸುತ್ತಿವೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಯೊಳಗೆ ಪರೀಕ್ಷೆಯ ವ್ಯವಸ್ಥೆಯಿದ್ದಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಪರಿಕ್ಷೆ ನಡೆಸಬೇಕು. ಇಲ್ಲವಾದಲ್ಲಿ ಅವರ ಗಂಟಲ ದ್ರವದ ಮಾದರಿ ಪಡೆದು, ಪ್ರಯೋಗಾಲಯಗಳಿಗೆ ರವಾನಿಸಬೇಕು. ಮಾದರಿ ಸಂಗ್ರಹಕ್ಕೆ ₹ 200 ನಿಗದಿಪಡಿಸಬಹುದು. ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ದರಗಳು ಅನ್ವಯವಾಗಲಿದೆ ಎಂದು ಸೂಚಿಸಿದ್ದಾರೆ.

ADVERTISEMENT

ಕೋವಿಡ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಲು ಅಭಿವೃದ್ಧಿಪಡಿಸಿರುವ ಪೋರ್ಟಲ್‌ ಹಾಗೂ ಆ್ಯಪ್‌ನಲ್ಲಿ ಖಾಸಗಿ ಆಸ್ಪತ್ರೆಗಳು ಸಮರ್ಪಕವಾಗಿ ವಿವರಗಳನ್ನು ನಮೂದಿಸುತ್ತಿಲ್ಲ. ಹಾಸಿಗೆ ವಿವರ, ರೆಫರಲ್ ಚಿಕಿತ್ಸೆ ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡದಿದ್ದಲ್ಲಿ ಕಾನೂನಿನ ಅಡಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.