ADVERTISEMENT

ಆರೋಗ್ಯ ಇಲಾಖೆ ಎಡವಟ್ಟು l ಅದಲು ಬದಲಾದ ಕೋವಿಡ್‌ ಪರೀಕ್ಷಾ ವರದಿಗಳು

ಕಾನ್‌ಸ್ಟೆಬಲ್-ಗರ್ಭಿಣಿ ನಿರಾಳ

​ಪ್ರಜಾವಾಣಿ ವಾರ್ತೆ
Published 7 ಮೇ 2020, 1:08 IST
Last Updated 7 ಮೇ 2020, 1:08 IST
   

ಬೆಂಗಳೂರು: ಕೋವಿಡ್‌ ಪರೀಕ್ಷಾ ವರದಿ ಅದಲು ಬದಲಾಗಿಪೊಲೀಸ್ ಸಿಬ್ಬಂದಿಯನ್ನು ಸೋಂಕಿತರ ಪಟ್ಟಿಗೆ ಸೇರಿಸಿರುವುದುಹಾಗೂ ಪ್ರಯೋಗಾಲಯದ ಲೋಪದಿಂದ ಆರೋಗ್ಯವಂತ ಗರ್ಭಿಣಿಗೆ ಸೋಂಕು ತಗುಲಿದೆ ಎಂದು ವರದಿ ನೀಡಿರುವುದು ಬುಧವಾರ ಬಯಲಾಗಿದೆ.

ಮೇ 1ರಂದು ಪೊಲೀಸ್ ಸಿಬ್ಬಂದಿಗೆ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿತ್ತು. ಮೇ 4ರಂದು ಬಂದ ಪರೀಕ್ಷಾ ವರದಿಯಲ್ಲಿ ಒಬ್ಬ ಕಾನ್‌ಸ್ಟೆಬಲ್‌ಗೆ ಸೋಂಕು ತಗುಲಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇದರಿಂದಾಗಿ ಅವರನ್ನು ಕೋವಿಡ್‌–19 ಆಸ್ಪತ್ರೆಗೆ ದಾಖಲಿಸಿ, ಅವರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆದರೆ, ಎರಡನೇ ಬಾರಿ ಪರೀಕ್ಷೆ ಮಾಡಿದಾಗ ಅವರಿಗೆ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. ಈ ಮೊದಲು ನೀಡಿದ ವರದಿ ಬೇರೋಬ್ಬ ವ್ಯಕ್ತಿಯದ್ದಾಗಿದ್ದು, ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಪರೀಕ್ಷೆ ಮಾಡಿಸಿಕೊಂಡಿರುವುದೇ ಈ ಗೊಂದಲಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಭರ್ತಿ ಮಾಡಲಾದ ಎರಡು ಅರ್ಜಿಗಳಲ್ಲಿ ಒಂದೇ ಹೆಸರು ನಮೂದಾಗಿತ್ತು. ಒಬ್ಬ ವ್ಯಕ್ತಿಗೆ ಸೋಂಕು ತಗುಲಿರುವ ಬಗ್ಗೆ ವರದಿ ಬಂದ ಬಳಿಕ ಬೆಂಗಳೂರು ನಗರ ಜಿಲ್ಲಾ ಅಧಿಕಾರಿಗಳು ಅರ್ಜಿಯಲ್ಲಿ ನಮೂದಿಸಲಾಗಿದ್ದ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿದರು. ಬೇಗೂರು ಠಾಣೆಯ ಅಧಿಕಾರಿಗಳು ಕೂಡ ನಮ್ಮಲ್ಲಿ ಒಂದೇ ಹೆಸರಿನವರು ಇಬ್ಬರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಯಿತು ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

ಮೇ 5ರಂದು ಅದೇ ಹೆಸರಿನಲ್ಲಿ ಇನ್ನೊಬ್ಬ ವ್ಯಕ್ತಿಯ ವರದಿ ಬಂತು. ಅವರಿಗೆ ಸೋಂಕು ತಗುಲಿಲ್ಲ ಎನ್ನುವುದನ್ನು ದೃಢಪಡಿಸಲಾಗಿತ್ತು. ಒಂದೇ ಹೆಸರಿನ ವ್ಯಕ್ತಿಯ ವರದಿ ಎರಡು ಬಾರಿ ಬಂದಿದ್ದರಿಂದ ಗೊಂದಲ ಸೃಷ್ಟಿಯಾಯಿತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಸೋಂಕು ತಗುಲಿರುವುದು ಪೊಲೀಸ್ ಸಿಬ್ಬಂದಿಯ ಹೆಸರಿನ ಬೇರೆ ವ್ಯಕ್ತಿ ಎನ್ನುವುದು ದೃಢಪಟ್ಟಿತು.

ಗರ್ಭಿಣಿ ನಿರಾಳ:ಬಿಟಿಎಂ ಬಡಾವಣೆಯ ಗರ್ಭಿಣಿಗೆ ಸೋಂಕು ಇರುವುದು ಮಂಗಳವಾರ ಖಚಿತವಾಗಿತ್ತು. ಮತ್ತೊಮ್ಮ ಗಂಟಲ ದ್ರವದ ಪರೀಕ್ಷೆ ನಡೆಸಿದಾಗ ಸೋಂಕು ಇಲ್ಲ ಎಂದು ತಿಳಿದುಬಂದಿದೆ.ಜಯನಗರದ ಕ್ಲೌಡ್ 9 ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದ ಗರ್ಭಿಣಿಗೆ ಖಾಸಗಿ ಲ್ಯಾಬ್‌ನಲ್ಲಿ ತಪಾಸಣೆ ಮಾಡಿಸಲು ಶಿಫಾರಸು ಮಾಡಲಾಗಿತ್ತು. ಬುಧವಾರ ವಿಕ್ಟೋರಿಯಾ ಆಸ್ಪತ್ರೆಯ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ.ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದು, ವಿಚಾರಣೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಂಗಸಂದ್ರದ ಮಂಗಮ್ಮನಪಾಳ್ಯದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಯ (ರೋಗಿ 654) ಸಂಪರ್ಕದಿಂದ ಅವರ 25 ವರ್ಷದ ಪುತ್ರ ಹಾಗೂ 40 ವರ್ಷದ ಪತ್ನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪುತ್ರ ಖಾಸಗಿ ಕಂಪನಿಯೊಂದರಲ್ಲಿ ಕೊರಿಯರ್ ಬಾಯ್‌ ಆಗಿದ್ದು, ಲಾಕ್‌ಡೌನ್‌ನಿಂದಾಗಿ ಮನೆಯಿಂದಲೇ ಕೆಲಸ ಮಾಡಲು ಕಂಪನಿ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.