ADVERTISEMENT

ಶೇ 100 ರಷ್ಟು ಗುರಿ ಸಾಧನೆ: ಆರೋಗ್ಯ ಸಿಬ್ಬಂದಿಗೆ ಅಭಿನಂದನೆ

ಕೋವಿಡ್ ಲಸಿಕೆ: ಎರಡೂ ಡೋಸ್ ವಿತರಣೆ ಪೂರ್ಣಗೊಳಿಸಿದ ಪ್ರಥಮ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:49 IST
Last Updated 23 ಡಿಸೆಂಬರ್ 2021, 19:49 IST
ವೈದ್ಯಕೀಯ ಸಿಬ್ಬಂದಿ ಪರಸ್ಪರ ಕೇಕ್‌ ತಿನ್ನಿಸುವ ಮೂಲಕ ಸಂಭ್ರಮಿಸಿದರು. ಡಾ. ಮದಿನಿ, ಡಾ.ಎಸ್.ಜಿ. ಶ್ರೀನಿವಾಸ್ ಹಾಗೂ ಜೆ.ಮಂಜುನಾಥ್ ಇದ್ದಾರೆ –ಪ್ರಜಾವಾಣಿ ಚಿತ್ರ
ವೈದ್ಯಕೀಯ ಸಿಬ್ಬಂದಿ ಪರಸ್ಪರ ಕೇಕ್‌ ತಿನ್ನಿಸುವ ಮೂಲಕ ಸಂಭ್ರಮಿಸಿದರು. ಡಾ. ಮದಿನಿ, ಡಾ.ಎಸ್.ಜಿ. ಶ್ರೀನಿವಾಸ್ ಹಾಗೂ ಜೆ.ಮಂಜುನಾಥ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳ ವಿತರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಶೇ 100 ರಷ್ಟು ಗುರಿ ತಲುಪಿದೆ. ಈ ಸಾಧನೆ ಮಾಡಿದ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹಿರಿಮೆಗೆ ಭಾಜನವಾಗಿದೆ. ಈ ಸಾಧನೆಯ ರೂವಾರಿಗಳಾದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಗುರುವಾರ ಅಭಿನಂದಿಸಲಾಯಿತು. ಆರೋಗ್ಯ ಸಿಬ್ಬಂದಿ ಕೇಕ್‌ ಕತ್ತರಿಸುವ ಮೂಲಕ ಈ ಸಾಧನೆಯನ್ನು ಸಂಭ್ರಮಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಜೆ. ಮಂಜುನಾಥ್, ‘ಈ ಸಾಧನೆಯ ಹಿಂದೆ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಅನೇಕರ ಪರಿಶ್ರಮವಿದೆ. 2021ರ ಜ.16ರಿಂದ ಇಲ್ಲಿ ಲಸಿಕೆ ವಿತರಿಸಲಾಗುತ್ತಿದೆ. ಬಹಳಷ್ಟು ಜಿಲ್ಲೆಗಳಲ್ಲಿ ಮೊದಲನೇ ಡೋಸ್ ನೀಡುವ ಗುರಿ ತಲುಪಲು ಇನ್ನೂ ಸಾಧ್ಯವಾಗಿಲ್ಲ. ಆದರೆ, ನಾವು ಮೊದಲನೇ ಡೋಸ್ ವಿತರಣೆಯಲ್ಲಿ ಗುರಿಗಿಂತಲೂ ಹೆಚ್ಚು ಮಂದಿಗೆ ಲಸಿಕೆ ನೀಡಿ, ಶೇ 129 ರಷ್ಟು ಸಾಧನೆ ಮಾಡಿದ್ದೇವೆ’ ಎಂದು ತಿಳಿಸಿದರು.

‘ನಗರ ಜಿಲ್ಲೆ ವ್ಯಾಪ್ತಿಗೆ ಮೂರು ತಾಲ್ಲೂಕುಗಳು ಬರುತ್ತವೆ. ಇಲ್ಲಿ 36 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಲಸಿಕೆ ವಿತರಿಸಲು ಆರೋಗ್ಯ ಕಾರ್ಯಕರ್ತರ ಜೊತೆಗೆ ಗುತ್ತಿಗೆ ಆಧಾರದಲ್ಲಿಯೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಲಸಿಕೆ ವಿತರಿಸುವ ಮೊದಲು ಆಸ್ಪತ್ರೆ ಹಾಗೂ ಅಲ್ಲಿನ ಸಿಬ್ಬಂದಿ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. 18 ವರ್ಷಗಳು ಮೇಲ್ಪಟ್ಟವರ ಸಂಖ್ಯೆಯನ್ನೂ ಗುರುತಿಸಲಾಯಿತು. ವಿವಿಧೆಡೆ ಲಸಿಕಾ ಅಭಿಯಾನ ನಡೆಸಿ, ಫಲಾನುಭವಿಗಳಿಗೆ ಸಮಸ್ಯೆಯಾಗದಂತೆ ಲಸಿಕೆಯನ್ನು ವಿತರಿಸಲಾಯಿತು’ ಎಂದು ಹೇಳಿದರು.

ADVERTISEMENT

ಕಾರ್ಯಯೋಜನೆ ಸಾಕಾರ:‘ಕೆಲ ಔಷಧ ಕಂಪನಿಗಳೂ ಲಸಿಕಾ ಅಭಿಯಾನದಲ್ಲಿ ಕೈಜೋಡಿಸಿದವು. ಇದರಿಂದಾಗಿ ವಲಸೆ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡಲಾಯಿತು. 2021ರ ಆ.29ರಂದು ಮೊದಲ ಡೋಸ್‌ ವಿತರಣೆಯಲ್ಲಿ ಶೇ 100 ರಷ್ಟು ಸಾಧನೆ ಮಾಡಿದ್ದೆವು. ಕೆಲವರು ನಿಗದಿತ ಅವಧಿ ಮೀರಿದರೂ ಎರಡನೇ ಡೋಸ್ ಪಡೆಯಲು ಬಾರದಿದ್ದಾಗ ಅವರನ್ನು ಸಂಪರ್ಕಿಸಿ, ಲಸಿಕಾ ಕೇಂದ್ರಗಳಿಗೆ ಕರೆತರಲಾಯಿತು’ ಎಂದು ಹೇಳಿದರು.

‘ಲಸಿಕೆ ಲಭ್ಯತೆ, ವಿತರಣೆಗೆ ಸಂಬಂಧಿಸಿದಂತೆ ಕಾರ್ಯಯೋಜನೆಯನ್ನು ರೂಪಿಸಲಾಯಿತು. ಇದು ಸಾಕಾರವಾಗಲುಕೋವಿಡ್‌ ವಾರ್‌ ರೂಮ್ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಬಿಬಿಎಂಪಿ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಇರುವ ಕೆಲವರು ನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಆರೋಗ್ಯ ಕೇಂದ್ರಗಳಿಗೆ ಬಂದು, ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದ ನಾವು ಗುರಿಗಿಂತ ಹೆಚ್ಚಿನ ಮಂದಿಗೆ ಲಸಿಕೆ ನೀಡಿದ್ದೇವೆ’ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ. ರಜನಿ ನಾಗೇಶ್ ರಾವ್, ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ಡಾ.ಎಸ್‌.ಜಿ. ಶ್ರೀನಿವಾಸ್, ಆರ್‌ಸಿಎಚ್‌ಒ ಡಾ.ಮದಿನಿ ಇದ್ದರು.

5 ಸಾವಿರಕ್ಕೂ ಅಧಿಕ ಕೈದಿಗಳಿಗೂ ಲಸಿಕೆ
‘ಲಸಿಕೆ ಪಡೆಯಲು ಪ್ರಾರಂಭಿಕ ದಿನಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಭಯವನ್ನು ಹೋಗಲಾಡಿಸಿ, ಲಸಿಕೆಯ ಮಹತ್ವವನ್ನು ತಿಳಿಸಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಾರಂಭಿಸಿದರು. ಪರಪ್ಪನ ಅಗ್ರಹಾರದಲ್ಲಿಯೂ ಲಸಿಕೆ ಶಿಬಿರ ನಡೆಸಿ, ಅಲ್ಲಿ 5 ಸಾವಿರಕ್ಕೂ ಅಧಿಕ ಕೈದಿಗಳಿಗೆ ಲಸಿಕೆ ನೀಡಲಾಯಿತು. ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಲಸಿಕಾ ಮೇಳವನ್ನೂ ನಡೆಸಿದೆವು. ಕೊಳೆಗೇರಿ ಪ್ರದೇಶಗಳು ಸೇರಿದಂತೆ ವಿವಿಧೆಡೆ ಉಚಿತವಾಗಿ ಲಸಿಕೆ ಒದಗಿಸಲಾಯಿತು. ಕೆಲ ಖಾಸಗಿ ಆಸ್ಪತ್ರೆಗಳೂ ಈ ಕಾರ್ಯಕ್ಕೆ ಸಹಕಾರ ನೀಡಿದವು’ ಎಂದು ಜೆ. ಮಂಜುನಾಥ್ ವಿವರಿಸಿದರು.

*
ಕೊರೊನಾ ವೈರಾಣುವಿನ ರೂಪಾಂತರಿ ಕಾಣಿಸಿಕೊಂಡಿರುವುದರಿಂದ ಲಸಿಕೆ ಪಡೆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಹೊಸ ವರ್ಷದ ಸಂದರ್ಭದಲ್ಲಿ ಮೈಮರೆತು, ಗುಂಪು ಸೇರಬಾರದು.
-ಜೆ. ಮಂಜುನಾಥ್, ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.