ADVERTISEMENT

ಬಿಬಿಎಂಪಿ: 29 ಸಾವಿರ ಮಕ್ಕಳಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 19:38 IST
Last Updated 3 ಜನವರಿ 2022, 19:38 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 15ರಿಂದ 18 ವರ್ಷದ ಒಳಗಿನ 29,423 ಮಕ್ಕಳಿಗೆ ಸೋಮವಾರ ಕೋವಿಡ್‌ ವಿರುದ್ಧದ ಲಸಿಕೆ ನೀಡಲಾಯಿತು.

5,482 ಶಾಲೆಗಳು ಮತ್ತು 577 ಪದವಿಪೂರ್ವ ಕಾಲೇಜಿನ 4.41 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಶಿಕ್ಷಣ ಇಲಾಖೆ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳ ಸಮನ್ವಯದೊಂದಿಗೆ ಬಿಬಿಎಂಪಿಯು ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ.

ನಗರದ ಭೈರವೇಶ್ವರ ನಗರದಲ್ಲಿರುವ ಪಾಲಿಕೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಎಸ್ಸೆಸ್ಸೆಲ್ಸಿಯ ಎಂಟು ವಿದ್ಯಾರ್ಥಿಗಳಿಗೆ ಮೊದಲ ಡೋಸ್‌ ನೀಡಲಾಯಿತು.

ADVERTISEMENT

196 ಶಾಲೆಗಳು ಮತ್ತು 59 ಕಾಲೇಜುಗಳಲ್ಲಿ ಲಸಿಕೆ ನೀಡಲಾಯಿತು. ಸೋಮವಾರ 40,639 ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಗುರಿ ನಿಗದಿಪಡಿಸಲಾಗಿತ್ತು. ಇವರಲ್ಲಿ 29,423 ಲಸಿಕೆ ನೀಡಲಾಗಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಲಸಿಕೆ ನೀಡುವ ಕುರಿತು ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಸ್ವಂತ ಅಥವಾ ಪೋಷಕರ ಮೊಬೈಲ್‌ ಸಂಖ್ಯೆಗಳನ್ನು ಬಳಸಿ ನೋಂದಾಯಿಸಿಕೊಳ್ಳಬಹುದು. ಸಂಸ್ಥೆಯ ಮುಖ್ಯಸ್ಥರ ಮೊಬೈಲ್‌ ಸಂಖ್ಯೆಯನ್ನು ಸಹ ಬಳಸಬಹುದು. ಒಂದು ಮೊಬೈಲ್‌ ಸಂಖ್ಯೆಯಿಂದ ಆರು ಮಕ್ಕಳು ನೋಂದಾಯಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.