ADVERTISEMENT

ಬೆಂಗಳೂರು ನಗರ ಜಿಲ್ಲೆ: 1 ಕೋಟಿ ಮಂದಿಗೆ ಕೋವಿಡ್‌ ಲಸಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 21:00 IST
Last Updated 25 ಆಗಸ್ಟ್ 2021, 21:00 IST
ಜೆ. ಮಂಜುನಾಥ್
ಜೆ. ಮಂಜುನಾಥ್   

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 1 ಕೋಟಿಗೂ ಅಧಿಕ ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ನಗರದ ವಿವಿಧ ಲಸಿಕಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಪಡೆದವರ ಒಟ್ಟು ಸಂಖ್ಯೆ ಬುಧವಾರ ಸಂಜೆ ವೇಳೆ 1 ಕೋಟಿಯ ಗಡಿ ದಾಡಿತು.

ನಗರ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,00,34,598 ಮಂದಿ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರು 24,43,914 ಮಂದಿ ಹಾಗೂ ಒಂದು ಡೋಸ್‌ ಮಾತ್ರ ಪಡೆದವರ ಸಂಖ್ಯೆ 75,90,684.

‘ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳು, ಬಿಬಿಎಂಪಿಯ 198 ವಾರ್ಡ್‌ಗಳು, 6 ಪುರಸಭೆಗಳು, 1 ನಗರಸಭೆ, 87 ಗ್ರಾಮ ಪಂಚಾಯಿತಿಗಳ 1038 ಗ್ರಾಮಗಳಲ್ಲಿ ಈ ಲಸಿಕೆಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಬಿಬಿಎಂಪಿ ಹೊರತುಪಡಿಸಿ ಉಳಿದ ಕಡೆ ಲಸಿಕೆ ವಿತರಣೆಯಲ್ಲಿ ಶೇ 90 ಗುರಿಸಾಧನೆ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 70 ರಷ್ಟು ಮಂದಿ ಕನಿಷ್ಠ ಪಕ್ಷ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ.ಲಸಿಕೆ ಪಡೆದವರಲ್ಲಿ ಗಂಭಿರ ಸ್ವರೂಪದ ಅಡ್ಡ ಪರಿಣಾಮ ಉಂಟಾದ ಯಾವುದೇ ದೂರು ದಾಖಲಾಗಿಲ್ಲ ಅನ್ನುವುದು ಸಂತಸದ ವಿಚಾರ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘2021ರ ಜ.16ರಂದು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ ಮೂಲಕ ನಗರದಲ್ಲೂ ಲಸಿಕಾ ಅಭಿಯಾನ ಆರಂಭಗೊಂಡಿತ್ತು. ಕೋವಿಡ್‌ ನಿಯಂತ್ರಣ ಕಾರ್ಯದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯ ಫೆ.8ರಿಂದ ಆರಂಭವಾಗಿತ್ತು. ಸರ್ಕಾರಿ ನೌಕರರು ಈ ಹಂತದಲ್ಲಿ ಲಸಿಕೆ ಪಡೆದಿದ್ದರು. 45 ವರ್ಷ ಮೇಲ್ಪಟ್ಟವರಿಗೆ ಮಾ. 1ರಿಂದ ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಟಟ್ಟವರಿಗೆ ಮೇ 10ರಿಂದ ಲಸಿಕೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

‘ಅಂಗವಿಕಲರು ಸೇರಿದಂತೆ ಕೆಲವು ವಿಶೇಷ ವರ್ಗಗಳಿಗೆ ಲಸಿಕೆ ಪಡೆಯಲು ಉಚಿತ ವಾಹನ ಸೌಲಭ್ಯ ಒದಗಿಸಲಾಗಿದೆ. ಉದ್ದಿಮೆಗಳಿರುವಲ್ಲಿಗೆ ತೆರಳಿ ಲಸಿಕೆ ವಿತರಣೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಬಿಬಿಎಂಪಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳೆಲ್ಲ ಸೇರಿ ಕೆಲಸ ಮಾಡುವ ಮೂಲಕ ನಾವಿದ್ದನ್ನು ಸಾಧಿಸಿದ್ದೇವೆ. ಸಾರ್ವಜನಿಕರು ಕೂಡಾ ಉತ್ಸಾಹದಿಂದ ಲಸಿಕೆ ಪಡೆದಿದ್ದಾರೆ. ಲಸಿಕೆ ವಿತರಣೆಯ ಉಸ್ತುವಾರಿ ನೋಡಿಕೊಂಡ ವೈದ್ಯರಿಗೆ ಹಾಗೂ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಮಂಜುನಾಥ್‌ ತಿಳಿಸಿದರು.

ಬೆಂಗಳೂರು: ಲಸಿಕೆ ಪಡೆದವರ ವಿವರ (ಲಕ್ಷಗಳಲ್ಲಿ)

18–45 ವರ್ಷದೊಳಗಿನವರು: 50.6

45 ವರ್ಷ ಮೇಲ್ಪಟ್ಟವರು; 39.7

ಮುಂಚೂಣಿ ಕಾರ್ಯಕರ್ತರು: 5.7

ಆರೋಗ್ಯ ಕಾರ್ಯಕರ್ತರು; 4.1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.