ADVERTISEMENT

3 ಸಾವಿರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ

ಪಿಂಕ್‌ ಬೂತ್‌ಗಳಲ್ಲಿ ಲಸಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 20:50 IST
Last Updated 7 ಮಾರ್ಚ್ 2021, 20:50 IST

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸೋಮವಾರ ಬೆಂಗಳೂರಿನ ಸಿ.ವಿ. ರಾಮನ್ ಆಸ್ಪತ್ರೆ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಒಂದೊಂದು ಪಿಂಕ್ ಬೂತ್‌ಗಳನ್ನು ನಿರ್ಮಿಸಿ, ಅಲ್ಲಿ ಮಹಿಳಾ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗುತ್ತದೆ.

ಪಿಂಕ್‌ ಬೂತ್‌ಗಳಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಾರೆ. ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿರುವ ಕಾರಣ ಲಸಿಕೆ ವಿತರಣೆ ಅಭಿಯಾನಕ್ಕೆ ವೇಗ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸೋಮವಾರದಿಂದ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಎಲ್ಲ ದಿನಗಳು ಲಸಿಕೆ ವಿತರಣೆ ನಡೆಯಲಿದೆ. 3 ಸಾವಿರ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು, ದಿನವೊಂದಕ್ಕೆ 1.50 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಇಲಾಖೆ ಹೊಂದಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಲಸಿಕೆ ವಿತರಿಸಲಾಗುತ್ತದೆ. ಎಲ್ಲ ಕೇಂದ್ರಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನಕ್ಕೆ 50 ರಿಂದ 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ 200 ಮಂದಿಗೆ, 200 ಹಾಸಿಗೆಗಳ ಖಾಸಗಿ ಆಸ್ಪತ್ರೆಗಳಲ್ಲಿ 100 ಮಂದಿಗೆ, ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ 200ಕ್ಕೂ ಅಧಿಕ ಹಾಸಿಗೆಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಿಸಲು ಇಲಾಖೆ ಸೂಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.