ADVERTISEMENT

ದರ ಇಳಿಸಿದರೂ ಲಸಿಕೆಗೆ ನಿರಾಸಕ್ತಿ; ಮುನ್ನೆಚ್ಚರಿಕೆ ಡೋಸ್‌ಗೆ ಬಾರದ ಜನ

ಮುನ್ನೆಚ್ಚರಿಕೆ ಡೋಸ್‌ಗೆ ಬಾರದ ಜನ | ಆಸ್ಪತ್ರೆಗಳಲ್ಲಿ ಲಸಿಕೆ ವ್ಯರ್ಥ ಸಾಧ್ಯತೆ

ವರುಣ ಹೆಗಡೆ
Published 15 ಜೂನ್ 2022, 6:13 IST
Last Updated 15 ಜೂನ್ 2022, 6:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗೆ ದರ ಇಳಿಕೆ ಮಾಡಿದರೂ ನಗರದ ಖಾಸಗಿ ಆಸ್ಪತ್ರೆಗಳಲ್ಲಿನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಗದಿತ ಸಂಖ್ಯೆಯಲ್ಲಿ ಜನ ಬಾರದಿದ್ದಲ್ಲಿಲಸಿಕೆ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆಸೀಶೆ (ಬಾಟಲಿ) ತೆರೆಯಲು ಆಸ್ಪತ್ರೆಗಳು ನಿರಾಕರಿಸುತ್ತಿವೆ.

ಕಳೆದ ಏ.10ರಿಂದ18ರಿಂದ 60 ವರ್ಷದೊಳಗಿನವರಿಗೆಮುನ್ನೆಚ್ಚರಿಕೆ ಡೋಸ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ.ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ ದರವನ್ನು ತಯಾರಿಕಾ ಕಂಪನಿಗಳು ₹ 225ಕ್ಕೆ ಇಳಿಕೆ ಮಾಡಿವೆ. ಸೇವಾ ಶುಲ್ಕ ಸಹಿತ ಒಂದು ಡೋಸ್‌ ಲಸಿಕೆಗೆ ಆಸ್ಪತ್ರೆಗಳು ₹ 386 ಪಡೆಯುತ್ತಿವೆ. ಈ ಮೊದಲುಕೋವಿಶೀಲ್ಡ್ ಲಸಿಕೆಯ ಡೋಸ್‌ ಅನ್ನು ₹ 630ರಿಂದ ₹ 780ರ ವರೆಗಿನ ದರಕ್ಕೆಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ₹ 1,050 ರಿಂದ ₹ 1,410ರ ವರೆಗಿನ ದರಕ್ಕೆ ಒದಗಿಸಲಾಗುತ್ತಿತ್ತು. ಲಸಿಕೆಯ ದರ ಇಳಿಕೆ ಮಾಡಿದರೂ ಬಹುತೇಕ ಆಸ್ಪತ್ರೆಗಳಲ್ಲಿ ದೈನಂದಿನ ವಿತರಣೆ ಗುರಿ ಸಾಧ್ಯವಾಗುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ 18ರಿಂದ 44 ವರ್ಷದವರಲ್ಲಿ 55.51 ಲಕ್ಷ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. 45 ವರ್ಷಗಳು ಮೇಲ್ಪಟ್ಟವರಲ್ಲಿ 26 ಲಕ್ಷಕ್ಕೂ ಅಧಿಕ ಮಂದಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 18ರಿಂದ 60 ವರ್ಷದೊಳಗಿನವರಲ್ಲಿ 1.86 ಲಕ್ಷ ಮಂದಿ ಮಾತ್ರ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷಗಳು ಮೇಲ್ಪಟ್ಟವರಲ್ಲಿ 3.38 ಲಕ್ಷ ಮಂದಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ಹಾಕಲಾಗಿದೆ.

ADVERTISEMENT

ಕೋವಿಡ್ ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಗಳು ದಾಟಿದವರಿಗೆ ಉಚಿತವಾಗಿ ಸರ್ಕಾರಿ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಒದಗಿಸಲಾಗುತ್ತಿದೆ. ಉಳಿದವರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬೇಕಿದೆ. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಬಹುತೇಕರು ಅವಧಿ ಮುಗಿದರೂ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಕೇದ್ರಗಳ ಸಂಖ್ಯೆ ಇಳಿಕೆ: ಲಸಿಕೆಯ ಮುನ್ನೆಚ್ಚರಿಕೆ ಡೋಸ್ ವಿತರಣೆ ಪ್ರಾರಂಭವಾದಾಗ 150ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿ ಆಧಾರದಲ್ಲಿ ಲಸಿಕೆ ಲಭ್ಯವಾಗುತ್ತಿತ್ತು. ಈಗ ಖರೀದಿಸಿದ ಲಸಿಕೆ ದಾಸ್ತಾನು ಖಾಲಿಯಾಗದಿದ್ದರಿಂದ 20ಕ್ಕೂ ಅಧಿಕ ಆಸ್ಪತ್ರೆಗಳು ಲಸಿಕೆ ವಿತರಣೆಯಿಂದ ಹಿಂದೆ ಸರಿದಿವೆ. ಲಭ್ಯವಿರುವ ಲಸಿಕೆಯನ್ನು ಮಣಿಪಾಲ್, ಅಪೋಲೊ ಸೇರಿದಂತೆ ವಿವಿಧ ಆಸ್ಪತ್ರೆಗಳ ಸಮೂಹಕ್ಕೆ ವಿತರಿಸಿವೆ.

ಕೋವಿನ್ ಪೋರ್ಟಲ್‌ನಲ್ಲಿ ಲಸಿಕೆಯನ್ನು ಮುಂಚಿತವಾಗಿ ಕಾಯ್ದಿರಿಸಲು ಅವಕಾಶವಿದೆ.ಮದರ್‌ಹುಡ್, ಅಪೋಲೊ ಕ್ಲಿನಿಕ್, ಮಣಿಪಾಲ್ ಕ್ಲಿನಿಕ್, ಫೋರ್ಟಿಸ್, ಮೆಡಿಹೋಪ್, ಪೀಪಲ್ ಟ್ರೀ ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಲಸಿಕೆ ಕಾಯ್ದಿರಿಸಲು ನಿಗದಿಪಡಿಸಲಾದ ಬಹುತೇಕ ಸ್ಲಾಟ್‌ಗಳು ಖಾಲಿ ಉಳಿದಿವೆ.

‘ಕೋವಿಡ್‌ ಭಯ ಕಡಿಮೆಯಾಗಿರುವುದರಿಂದ ಕೆಲವರು ಮುನ್ನೆಚ್ಚರಿಕೆ ಡೋಸ್ ಪಡೆಯಲು ಮುಂದೆ ಬರುತ್ತಿಲ್ಲ. ಲಸಿಕೆ ಪಡೆದಿರುವ ಬಗ್ಗೆ ಮನೆ ಮನೆಗೆ ತೆರಳಿ, ಸಮೀಕ್ಷೆ ನಡೆಸಲು ಈ ಹಿಂದೆ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ಲಸಿಕೆ ಪಡೆಯದವರಿಗೆ ಅಲ್ಲಿಯೇ ಲಸಿಕೆಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ಮತ್ತೆ ಆ ವ್ಯವಸ್ಥೆ ಪ್ರಾರಂಭಿಸುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.