ADVERTISEMENT

ಕೋವಿಡ್‌–19: ಆಂಬುಲೆನ್ಸ್ ಆಗಲಿವೆ 100 ಟೆಂಪೊ ಟ್ರಾವೆಲರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 9:23 IST
Last Updated 17 ಜುಲೈ 2020, 9:23 IST
ಆಂಬುಲೆನ್ಸ್
ಆಂಬುಲೆನ್ಸ್   

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಕೊರತೆಯೂ ಕಾಡುತ್ತಿದೆ. ಇಂಥ ಸಂದರ್ಭದಲ್ಲೇ ಟೆಂಪೊ ಟ್ರಾವೆಲರ್‌ಗಳನ್ನು ಆಂಬುಲೆನ್ಸ್‌ಗಳಾಗಿ ಪರಿವರ್ತಿಸಿ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.

ನಗರದ ಸಂಚಾರ ಪೊಲೀಸರು, 100 ಟೆಂಪೊ ಟ್ರಾವೆಲರ್‌ಗಳನ್ನು ಗುರುತಿಸಿ ಆಂಬುಲೆನ್ಸ್‌ಗಳಾಗಿ ಪರಿವರ್ತಿಸುತ್ತಿದ್ದಾರೆ. ಆ ಪೈಕಿ 20 ಟೆಂಪೊ ಟ್ರಾವೆಲರ್‌ಗಳನ್ನು ಈಗಾಗಲೇ ಆ್ಯಂಬುಲೆನ್ಸ್‌ಗಳನ್ನು ಪರಿವರ್ತಿಸಲಾಗಿದ್ದು, ಅವುಗಳನ್ನು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.ಉಳಿದ 80 ವಾಹನಗಳ ಪರಿವರ್ತನೆ ಪ್ರಗತಿಯಲ್ಲಿದ್ದು, ನಿತ್ಯವೂ 20 ವಾಹನಗಳು ಆಂಬುಲೆನ್ಸ್ ಆಗಿ ಪರಿವರ್ತನೆಗೊಳ್ಳಲಿವೆ. ಅವುಗಳನ್ನು ಸಹ ಬಿಬಿಎಂಪಿ ಸುಪರ್ದಿಗೆ ನೀಡಲಾಗುತ್ತದೆ.

200 ವಾಹನಗಳನ್ನು ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸಂಚಾರ ಪೊಲೀಸರಿಗೆ ತಿಳಿಸಿದ್ದರು. ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಬಿ.ಆರ್. ರವಿಕಾಂತೆಗೌಡ, ಡಿಸಿಪಿಗಳಾದ ಎಂ. ನಾರಾಯಣ, ಸೌಮ್ಯಲತಾ, ಇನ್‌ಸ್ಪೆಕ್ಟರ್‌ಗಳಾದ ವಿಜಿಕುಮಾರ್, ಗಿರಿರಾಜ್ ಹಾಗೂ ಸಿಬ್ಬಂದಿ ಹೆಚ್ಚಿನ ಮುತುರ್ವಜಿ ವಹಿಸಿ 100 ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾಹನ ಒದಗಿಸುವ ಭರವಸೆಯನ್ನೂ ಸಂಚಾರ ಪೊಲೀಸರು ನೀಡಿದ್ದಾರೆ‌.

ADVERTISEMENT

ಕಬ್ಬನ್ ಪೇಟೆಯ ಕಾವೇರಿ ಆಂಬುಲೆನ್ಸ್ ಸರ್ವಿಸಸ್ ಮೂಲಕ ಟೆಂಪೊ ಟ್ರಾವೆಲರ್‌ಗಳನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಲಾಗುತ್ತಿದೆ. ಪ್ರತಿ ವಾಹನಕ್ಕೂ ಬಿಬಿಎಂಪಿ ವತಿಯಿಂದ ಬಾಡಿಗೆ ನೀಡಲಾಗುತ್ತದೆ. ಹಾಸಿಗೆಗಳ ಲಭ್ಯತೆ ನೋಡಿಕೊಂಡು ದಿನದ 24 ಗಂಟೆಯೂ ಈ ಆಂಬುಲೆನ್ಸ್‌ಗಳು ಓಡಾಡಲಿವೆ. ಆಂಬುಲೆನ್ಸ್‌ಗಳ ಚಾಲಕರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.