ಬೆಂಗಳೂರು: ನಗರದಲ್ಲಿ ಮತ್ತೆ 2,544 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರಲ್ಲಿ 22 ಮಂದಿ ಮೃತಪಟ್ಟಿದ್ದಾರೆ.
ಒಂದು ವಾರದಲ್ಲೇ 12,172 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಇದೇ ಅವಧಿಯಲ್ಲಿ 171 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 69 ಸಾವಿರ ದಾಟಿದ್ದು, ಮೃತರ ಸಂಖ್ಯೆ 1,200ಕ್ಕೆ ಏರಿಕೆಯಾಗಿದೆ. 1,131 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ 35 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, 33 ಸಾವಿರಕ್ಕೂ ಅಧಿಕ ಮಂದಿ ಆಸ್ಪತ್ರೆ ಸೇರಿ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿಪಶ್ಚಿಮ ವಲಯದಲ್ಲಿಯೇ ಅಧಿಕ ಮಂದಿ (382) ಸೋಂಕಿತರಾಗಿದ್ದಾರೆ. ಪೂರ್ವ ವಲಯದಲ್ಲಿ 308, ದಕ್ಷಿಣ ವಲಯದಲ್ಲಿ 258, ಬೊಮ್ಮನಹಳ್ಳಿಯಲ್ಲಿ 214, ಮಹದೇವಪುರದಲ್ಲಿ 192, ಆರ್.ಆರ್.ನಗರದಲ್ಲಿ 161, ಯಲಹಂಕದಲ್ಲಿ124 ಹಾಗೂ ದಾಸರಹಳ್ಳಿಯಲ್ಲಿ111 ಮಂದಿಗೆ ಸೋಂಕು ತಗುಲಿದೆ.
10 ದಿನಗಳಿಂದ ಪಶ್ಚಿಮ ವಲಯದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಅವಧಿಯಲ್ಲಿ ನಗರದಲ್ಲಿ ಸೋಂಕಿತರಾದವರಲ್ಲಿ ಶೇ25 ರಷ್ಟು ಮಂದಿ ಆ ಭಾಗಕ್ಕೆ ಸೇರಿದವರು.
ಶುಕ್ರವಾರ ದೃಢಪಟ್ಟ ಮರಣ ಪ್ರಕರಣಗಳಲ್ಲಿ 10 ಮಂದಿ 50 ವರ್ಷದೊಳಗಿನವರು. ಇದರಲ್ಲಿ 22 ವರ್ಷ ಹಾಗೂ 23 ವರ್ಷದ ಯುವಕರು ಕೂಡ ಸೇರಿದ್ದಾರೆ.
326 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.ನಗರದ ಜ್ವರ ಚಿಕಿತ್ಸಾಲಯಗಳಲ್ಲಿ ಒಂದೇ ದಿನ 4,114 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಅಲ್ಲಿ ಈವರೆಗೆ ಒಟ್ಟು 73,972 ಮಂದಿಯನ್ನು ಪರೀಕ್ಷೆ ಮಾಡಲಾಗಿದೆ.
ನಗರದ ಆಸ್ಪತ್ರೆಗಳಿಗೆ ಶಿಫಾರಸು
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಿಂದ ಶಿಫಾರಸು ಮಾಡಲ್ಪಡುವ ರೋಗಿಗಳನ್ನು ನಿಗದಿತ ಆಸ್ಪತ್ರೆಗಳು ಬಿಬಿಎಂಪಿಯ ಮೂಲಕ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಆರೊಗ್ಯ ಇಲಾಖೆಯ ಆಯಕ್ತ ಪಂಕಜ್ ಕುಮಾರ್ ಪಾಂಡೆ ಸುತ್ತೋಲೆ ಹೊರಡಿಸಿದ್ದಾರೆ.
ಜಿಲ್ಲಾಡಳಿತಗಳು ರೋಗಿಗಳನ್ನು ನಗರದ ಆಸ್ಪತ್ರೆಗಳಿಗೆ ತುರ್ತು ಸಂದರ್ಭದಲ್ಲಿ ಶಿಫಾರಸು ಮಾಡಿದಾಗ ದಾಖಲಿಸಿಕೊಳ್ಳಲು ನಿರಾಕರಿಸಿದ ಪ್ರಕರಣಗಳು ನಡೆದಿವೆ. ಇದರಿಂದ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು. ಬಿಬಿಎಂಪಿ ರೂಪಿಸಿದ ಆನ್‌ಲೈನ್ ಪೋರ್ಟಲ್‌ನಲ್ಲಿ ಆಸ್ಪತ್ರೆಗಳು ಕಡ್ಡಾಯವಾಗಿ ಸೋಂಕಿತರು ಹಾಗೂ ಸೋಂಕು ಶಂಕಿತರು ದಾಖಲಾಗುವ ಮತ್ತು ಮನೆಗೆ ತೆರಳುವ ಮಾಹಿತಿ ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತಗಳು ತಮ್ಮ ವ್ಯಾಪ್ತಿಯ ಕೋವಿಡ್ ರೋಗಿಗಳನ್ನು ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸುವ ಮುನ್ನ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಅಧಿಕಾರಿಗೆ ಪತ್ರದ ಮೂಲಕ ರೋಗಿಯ ಸಂಖ್ಯೆ, ಹೆಸರು, ವಿಳಾಸ, ಶಿಫಾರಸಿಗೆ ಕಾರಣ ಸೇರಿದಂತೆ ಪೂರ್ಣ ವಿವರಗಳನ್ನೊಳಗೊಂಡ ಮನವಿ ಸಲ್ಲಿಸಬೇಕು. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಮಾತ್ರ ಶಿಫಾರಸು ಮಾಡುವ ಅಧಿಕಾರ ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದ ಕೋವಿಡ್ ಪ್ರಕರಣಗಳ ಅಂಕಿ–ಅಂಶ
ಒಟ್ಟು ಪ್ರಕರಣಗಳು; 69,572
ಗುಣಮುಖರಾದವರು;35,063
ಸಕ್ರಿಯ ಪ್ರಕರಣಗಳು;33,308
ಮೃತಪಟ್ಟವರು; 1,200
ಈ ದಿನದ ಏರಿಕೆ;2,147
ಗುಣಮುಖರು;1,131
ಮೃತಪಟ್ಟವರು;22
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.