ADVERTISEMENT

ಬೆಂಗಳೂರಿಗೆ ಬರುವವರಿಗೆ 'ಆರ್‌ಟಿ–ಪಿಸಿಆರ್‌' ನೆಗೆಟಿವ್ ಕಡ್ಡಾಯ: ಕೆ.ಸುಧಾಕರ್

ಕೋವಿಡ್ ಪರೀಕ್ಷೆ: ಏಪ್ರಿಲ್‌ 1ರಿಂದ ಅನ್ವಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 11:05 IST
Last Updated 25 ಮಾರ್ಚ್ 2021, 11:05 IST
ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ನಡೆಸಲು ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು–ಸಾಂದರ್ಭಿಕ ಚಿತ್ರ
ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ನಡೆಸಲು ಗಂಟಲು ದ್ರವ ಮಾದರಿ ಸಂಗ್ರಹಿಸುತ್ತಿರುವುದು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕದ ಹೊರ ಭಾಗದಿಂದ ಬೆಂಗಳೂರು ಪ್ರವೇಶಿಸುವವರು ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿರಬೇಕು ಹಾಗೂ ವರದಿ ನೆಗೆಟಿವ್‌ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಗುರುವಾರ ಹೇಳಿದರು.

ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಮಾತ್ರವೇ ಈ ನಿಯಮ ಅನ್ವಯವಾಗಲಿದ್ದು, ರಾಜ್ಯದ ಉಳಿದ ಭಾಗಗಳಿಗೆ ಅಲ್ಲ. ಏಪ್ರಿಲ್‌ 1ರಿಂದಲೇ ಈ ನಿಯಮ ಜಾರಿಯಾಗಲಿದೆ ಎಂದರು.

'ಮುಂಬರುವ ದಿನಗಳಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಕೋವಿಡ್‌–19 ಪ್ರಕರಣಗಳ ಪೈಕಿ ಶೇ 60ರಷ್ಟು ಅಂತರ್ ರಾಜ್ಯ ಪ್ರಯಾಣಿಕರಲ್ಲಿ ವರದಿಯಾಗಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಇತರೆ ಸ್ಥಳಗಳಲ್ಲಿ ವಾಸಿಸುವವರು ಹೊರ ರಾಜ್ಯಗಳಿಂದ ಬರುತ್ತಿದ್ದರೆ ಕಡ್ಡಾಯವಾಗಿ ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಬೇಕು. ಯಾವುದೇ ರಾಜ್ಯದಿಂದ ಬಂದರೂ ಪರೀಕ್ಷೆ ಕಡ್ಡಾಯ. ಬಿಬಿಎಂಪಿ ಕಮಿಷನರ್‌ ಈ ಕುರಿತು ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದ್ದಾರೆ' ಎಂದು ಸುಧಾಕರ್‌ ತಿಳಿಸಿದರು.

ADVERTISEMENT

ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿ ಇರುವುದು ಕಡ್ಡಾಯ, ಇಲ್ಲವಾದರೆ ಅವರಿಗೆ ಇಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಪ್ರಸ್ತುತ ಮಹಾರಾಷ್ಟ್ರ, ಕೇರಳ, ಪಂಜಾಬ್‌ ಹಾಗೂ ಚಂಡೀಗಡದಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ–ಪಿಸಿಆರ್‌ ಪರೀಕ್ಷೆ ಕಡ್ಡಾಯವಿದೆ.

ಬುಧವಾರ ಬೆಂಗಳೂರಿನಲ್ಲಿ ನಾಲ್ಕು ತಿಂಗಳ ಗರಿಷ್ಠ, ಸುಮಾರು 1,400 ಪ್ರಕರಣಗಳು ದಾಖಲಾಗಿವೆ. ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಗುರುವಾರ ಬೆಳಿಗ್ಗೆ ಬಿಬಿಎಂಪಿಯ ಎಂಟು ಜಂಟಿ ಆಯುಕ್ತರೊಂದಿಗೆ ಸಚಿವ ಸುಧಾಕರ್‌ ಚರ್ಚೆ ನಡೆಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಲು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಅವರು ಬಸ್‌ ನಿಲ್ದಾಣಗಳು, ಮಾರುಕಟ್ಟೆಗಳು, ಚಿತ್ರ ಮಂದಿರಗಳು, ಮದುವೆ ಹಾಗೂ ಸಮಾರಂಭಗಳ ಸಭಾಂಗಣಗಳು, ಶಾಲೆಗಳು ಹಾಗೂ ಕಾಲೇಜು ಆವರಣಗಳಲ್ಲಿ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.