ADVERTISEMENT

‘ವಿದ್ಯುತ್‌ ದರ ಏರಿಕೆ ನಿರ್ಧಾರ ಕೈಬಿಡಿ’

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 13:40 IST
Last Updated 12 ಜೂನ್ 2021, 13:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯ ಸರ್ಕಾರವು ವಿದ್ಯುತ್‌ ಬೆಲೆ ಏರಿಕೆ ನಿರ್ಧಾರ ಕೈಬಿಡಬೇಕು. ವಿದ್ಯುತ್‌ ವಲಯವನ್ನು ಖಾಸಗೀಕರಣಗೊಳಿಸುವ ಹುನ್ನಾರದಿಂದ ಹಿಂದೆ ಸರಿಯಬೇಕು’ ಎಂದು ಭಾರತೀಯ ಕಮ್ಯೂನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದ್ದಾರೆ.

‘ರಾಜ್ಯದ ಜನ ಕೋವಿಡ್‌ನಿಂದಾಗಿ ಕಂಗಾಲಾಗಿದ್ದಾರೆ. ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಸಿದೆ. ರಾಜ್ಯ ಸರ್ಕಾರವು ವಿದ್ಯುತ್‌ ದರ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ. ಇದು ಅಮಾನವೀಯ ನಡೆ’ ಎಂದು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಕೈಗಾರಿಕೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ವಿದ್ಯುತ್‌ ದರ ಏರಿಸುವ ಮೂಲಕ ಸಣ್ಣ ಕೈಗಾರಿಕೆಗಳ ಮೇಲೆ ಗದಾ ಪ್ರಹಾರ ನಡೆಸಲಾಗುತ್ತಿದೆ. ಸರ್ಕಾರದ ಈ ನಡೆಯಿಂದಾಗಿ ಸಣ್ಣ ಕೈಗಾರಿಕೆಗಳಿಗೆ ಬೀಗ ಬೀಳಲಿದೆ. ಹೀಗಾದರೆ ಕಾರ್ಮಿಕರ ಜೊತೆಗೆ ಮಾಲೀಕರು ಬೀದಿಗೆ ಬರಲಿದ್ದಾರೆ. ನಿರುದ್ಯೋಗ ಹಾಗೂ ಬಡತನ ತಾಂಡವವಾಡಲಿದೆ. ಅದಾನಿ, ಜಿಂದಾಲ್‌ನಂತಹ ದೊಡ್ಡ ಕಂಪನಿಗಳ ಲೂಟಿಗೆ ಸರ್ಕಾರ ರಹದಾರಿ ಮಾಡಿಕೊಟ್ಟಿರುವುದು ವಿಪರ್ಯಾಸ’ ಎಂದು ಹೇಳಿದ್ದಾರೆ.

ADVERTISEMENT

‘ವಿದ್ಯುತ್‌ ಸರಬರಾಜು ಕಂಪನಿಗಳು ಪ್ರಸರಣೆ ಹಾಗೂ ವಿತರಣೆಯಲ್ಲಿನ ಶೇ14ರಷ್ಟು ವಿದ್ಯುತ್‌ ಸೋರಿಕೆ ತಡೆಯಲು ವಿಫಲವಾಗಿವೆ. ಇದನ್ನು ಶೇ 5ಕ್ಕೆ ಇಳಿಸುವ ಜೊತೆಗೆ ಖಾಸಗಿ ಕಂಪನಿಗಳಿಂದ ಉತ್ಪಾದನಾ ವೆಚ್ಚಕ್ಕಿಂತಲೂ ದುಬಾರಿ ಬೆಲೆಗೆ ವಿದ್ಯುತ್‌ ಖರೀದಿಸುವುದನ್ನು ನಿಲ್ಲಿಸಬೇಕು. ಹಾಗಾದಾಗ ಬೆಲೆ ಏರಿಕೆಯ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.