
ಬೆಂಗಳೂರು: ‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಉದ್ಯೋಗ, ಆಹಾರ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಉದ್ಯಮಿಗಳಾದ ಅದಾನಿ, ಅಂಬಾನಿ ಅವರ ಸಂಪತ್ತು ಮಾತ್ರ ಬೆಳೆಯುತ್ತಿದೆ. ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್ ಹೇಳಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಸಿಪಿಎಂ ಆಯೋಜಿಸಿದ್ದ ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದ ಅವಧಿಯಲ್ಲೂ ಜನರ ಬದುಕಿನಲ್ಲಿ ಸುಧಾರಣೆ ಆಗಲಿಲ್ಲ. ಜನರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪರ್ಯಾಯ ರಾಜಕಾರಣವೆಂದರೆ ನೀತಿಗಳ ಬದಲಾವಣೆಯೇ, ಹೊರತು ಸರ್ಕಾರ ಅಥವಾ ಮುಖ್ಯಮಂತ್ರಿ ಬದಲಾವಣೆ ಅಲ್ಲ. ಕೃಷಿ ವಲಯ ಬಂಡವಾಳಶಾಹಿಗಳ ಪಾಲಾಗಿದೆ. ಭೂಸ್ವಾಧೀನ ಕಾಯ್ದೆಗಳನ್ನು ಅತ್ಯಂತ ಕೆಟ್ಟದಾಗಿ ಜಾರಿ ಮಾಡಲಾಗುತ್ತಿದೆ. ರೈತರಿಂದ ಜಮೀನು ಕಿತ್ತು ಕಂಪನಿಗಳಿಗೆ ಕೊಡುವ ರಾಜ್ಯ, ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ, ಬದಲಾಗಿ ಹೆಚ್ಚಿಸಿವೆ. ಕಾರ್ಮಿಕ ಕಾಯ್ದೆಗಳು ಕಾರ್ಮಿಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಉದ್ಯೋಗದ ಬಗ್ಗೆ ಯೋಜನೆ-ಯೋಚನೆಗಳೇ ಇಲ್ಲ. ₹30 ಸಾವಿರ ಕನಿಷ್ಟ ಕೂಲಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಮಾತನಾಡಿ, ‘ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ಕೇರಳದ ಮಾದರಿಯಲ್ಲಿ ಕಸದ ಬುಟ್ಟಿಗೆ ಎಸೆಯುವ ಕ್ರಾಂತಿ ನಡೆಯಬೇಕಿದೆ. ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರಿಗೆ ಅನ್ಯಾಯವಾದರೆ ಅದರ ವಿರುದ್ಧ ಧ್ವನಿ ಎತ್ತುವ ಅಥವಾ ಪ್ರತಿಭಟನೆ ಮಾಡುವ ಅವಕಾಶ ಇಲ್ಲ. ಎಷ್ಟು ಬೇಕಾದರೂ ಶೋಷಣೆ ಮಾಡಬಹುದು ಎನ್ನುದನ್ನು ಕಾರ್ಮಿಕ ಸಂಹಿತೆಗಳು ಹೇಳುತ್ತವೆ’ ಎಂದು ಹೇಳಿದರು.
ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡುವುದಿಲ್ಲ ಎಂದು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಘೋಷಿಸಿದೆ. ಕಾರ್ಮಿಕ ಹಕ್ಕು ಎನ್ನುವುದು ಭಿಕ್ಷೆ ಅಲ್ಲ, ಕಾರ್ಮಿಕರು ಹೋರಾಟದ ಮೂಲಕ ಪಡೆದುಕೊಂಡ ಹಕ್ಕು ಎಂದು ಅಲ್ಲಿನ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಕೇಂದ್ರದ ಕಾರ್ಮಿಕ ಸಂಹಿತೆ ವಿರುದ್ಧ ಏಕೆ ನಿಲುವು ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ವಿಧಾನಮಂಡಲ ಅಧಿವೇಶನದಲ್ಲಿ ಕಾರ್ಮಿಕ ಸಂಹಿತೆಯ ಬಗ್ಗೆ ಚರ್ಚೆಯೇ ಆಗಿಲ್ಲ. ಕಾರ್ಮಿಕ ಮತ್ತು ಆರ್ಥಿಕ ನೀತಿಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಯಾವುದೇ ವ್ಯತ್ಯಾಸ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.
ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ ಯು.ವಾಸುಕಿ ಮಾತನಾಡಿ, ‘ಕೇಂದ್ರ ಸರ್ಕಾರ ಜನರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಪರ ಕೆಲಸ ಮಾಡುತ್ತಿದೆ. ಐದು ಮಂದಿ ಶ್ರೀಮಂತರು ದೇಶದ ಸಂಪನ್ಮೂಲವನ್ನು ತಮ್ಮದಾಗಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಇದೇ ವೇಳೆ ಕೃಷಿ ಬಿಕ್ಕಟ್ಟು, ಭೂಮಿ ಪ್ರಶ್ನೆ ಸೇರಿ 20 ಅಂಶಗಳ ಹಕ್ಕೊತ್ತಾಯ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ಹೋರಾಟಗಾರರಾದ ಶ್ರೀರಾಮ್, ಜಿ.ಎನ್.ನಾಗರಾಜ್, ಎಸ್.ವರಲಕ್ಷ್ಮೀ, ಕೆ.ನೀಲಾ, ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.