ADVERTISEMENT

ಮರ ಸಂರಕ್ಷಣೆಗೆ ಸಮಿತಿ ರಚಿಸಿ

ಮರಗಳ ಮಾರಣ ಹೋಮ: ಕೋರ್ಟ್‌ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:34 IST
Last Updated 22 ಏಪ್ರಿಲ್ 2019, 19:34 IST
   

ಬೆಂಗಳೂರು: ‘ಅಭಿವೃದ್ಧಿ ಕಾಮಗಾರಿಗೆ ಬಲಿಯಾಗುವ ಮರಗಳನ್ನು ಉಳಿಸಲು ಅನುಸರಿಸಬೇಕಾದ ವೈಜ್ಞಾನಿಕ ವಿಧಾನಗಳ ರೂಪಿಸಲು ತಜ್ಞರ ಸಮಿತಿ ರಚಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

‘ಮೆಟ್ರೊ ಕಾಮಗಾರಿ ಉದ್ದೇಶಕ್ಕಾಗಿ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂದು ಆರೋಪಿಸಿ ದತ್ತಾತ್ರೇಯ ಟಿ ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ‘ವಿದೇಶಗಳಲ್ಲಿ ಮರಗಳನ್ನು ಸಂರಕ್ಷಿಸುವ ವಿಧಾನಗಳನ್ನು ಇಲ್ಲಿಯೂ ಏಕೆ ಅನುಸರಿಸಬಾರದು’ ಎಂದು ಪ್ರಶ್ನಿಸಿತಲ್ಲದೇ, ‘ಅಭಿವೃದ್ಧಿಗೆ ಅಡ್ಡಿಯಾಗುತ್ತವೆ ಎಂದು ಭಾವಿಸಲಾಗುವ ಮರಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯಾವ ರೀತಿ ಜಾಗ್ರತೆ ವಹಿಸಬಹುದು ಎಂಬುದಕ್ಕೆ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಇತರೆ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡಿ’ ಎಂದು ಸರ್ಕಾರಕ್ಕೆ ಸೂಚಿಸಿತು.

ADVERTISEMENT

‘ಮರಗಳನ್ನು ಕತ್ತರಿಸುವುದು ಬಿಟ್ಟು ಅನ್ಯ ಮಾರ್ಗವೇ ಇಲ್ಲ ಎನ್ನುವ ಸಂದರ್ಭಗಳಲ್ಲಿ ಮಾತ್ರವೇ ಮರಗಳನ್ನು ಕತ್ತರಿಸುವಂತಾಗಬೇಕು. ಈ ಸಮಿತಿಯು ಮರಗಳನ್ನು ಕತ್ತರಿಸುವ ಬದಲಿಗೆ ರಕ್ಷಣೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು’ ಎಂದು ನ್ಯಾಯಪೀಠ ಹೇಳಿದೆ.

ಆಕ್ಷೇಪಣೆ ಏನು?: ‘ಮೆಟ್ರೊ ರೈಲು ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರದಲ್ಲಿ ಹಲವು ದಶಕಗಳ ಹಳೆಯ ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

‘ಕರ್ನಾಟಕ ಮರ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಗರಾಭಿವೃದ್ಧಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ವಿಫಲವಾಗಿವೆ’ ಎಂಬುದು ಅರ್ಜಿದಾರರ ದೂರು.

‘ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ-1976 ಮತ್ತು ಕರ್ನಾಟಕ ಮರಗಳ ಸಂರಕ್ಷಣಾ ಅಧಿನಿಯಮಗಳು-1977 ಅನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ, ಬಿಬಿಎಂಪಿ, ಅರಣ್ಯ ಮತ್ತು ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.