ADVERTISEMENT

ಬೋಗಸ್‌ ಬಿಲ್‌ ಸೃಷ್ಟಿ ಆರೋಪ: ವಿಚಾರಣೆಗೆ ತಡೆ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 19:56 IST
Last Updated 14 ಡಿಸೆಂಬರ್ 2018, 19:56 IST
s
s   

ಬೆಂಗಳೂರು: ‘ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹120 ಕೋಟಿ ಮೊತ್ತದ ಸಿವಿಲ್ ಕಾಮಗಾರಿಯ ಬೋಗಸ್ ಬಿಲ್ ಸೃಷ್ಟಿಸಲಾಗಿದೆ’ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಪ್ರಕರಣದಲ್ಲಿ ಮುನಿರತ್ನ, ಅವರ ಪತ್ನಿ ಮಂಜುಳಾ ಹಾಗೂ ರಾಮ್‌ಬಾಬು ಅಲಿಯಾಸ್‌ ಸೂರಪ್ಪ ಬಾಬು ಅವರನ್ನು ‘ಸಹ ಆರೋಪಿ’ಗಳನ್ನಾಗಿ ಮಾಡಲು ಕೋರಿದ್ದ ಮಧ್ಯಂತರ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು.

‘ಲೋಕಾಯುಕ್ತ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ‘ಲೋಕಾಯುಕ್ತ ಕೋರ್ಟ್‌ಗೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಮುನಿರತ್ನ ಹೆಸರನ್ನು ಏಕೆ ಕೈ ಬಿಡಲಾಯಿತು ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ’ ಎಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಿದೆ.

ADVERTISEMENT

ಪ್ರಕರಣವೇನು?: ‘ಶಾಸಕ ಮುನಿರತ್ನ ಅವರಿಗೆ ಸೇರಿದೆ ಎನ್ನಲಾದ ವೈಯಾಲಿ ಕಾವಲ್ ಮುಖ್ಯ ರಸ್ತೆಯಲ್ಲಿರುವ ಮನೆಗೆ ಬಿಬಿಎಂಪಿಯ ಒಂದು ಸಾವಿರ ಕಡತಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಆ ಮನೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ₹ 120 ಕೋಟಿ ಮೊತ್ತದ ಸಿವಿಲ್ ಕಾಮಗಾರಿಗೆ ಬೋಗಸ್ ಬಿಲ್ ಸೃಷ್ಟಿಸಲಾಗುತ್ತಿದೆ’ ಎಂದು ಆರೋಪಿಸಿ ವೈ.ಎಚ್.ಶ್ರೀನಿವಾಸ್ ದೂರು ನೀಡಿದ್ದರು.

ಈ ದೂರಿನನ್ವಯ ಲೋಕಾಯುಕ್ತ ಪೊಲೀಸರು ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು ಮತ್ತು ದೋಷಾರೋಪ ಪಟ್ಟಿಯಲ್ಲಿ ಮುನಿರತ್ನ, ಅವರ ಪತ್ನಿ ಮಂಜುಳಾ ಹಾಗೂ ರಾಮ್‌ ಬಾಬು ಅಲಿಯಾಸ್‌ ಸೂರಪ್ಪ ಬಾಬುಗೆ ಕ್ಲೀನ್‌ಚಿಟ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.