ADVERTISEMENT

ಪಿಯು ವಿದ್ಯಾರ್ಥಿಗೆ ‘ಹ್ಯಾಕರ್‌’ನಿಂದ ಬ್ಲ್ಯಾಕ್‌ಮೇಲ್!

ಜೈಲು ಸೇರಿದ ತತ್ವಶಾಸ್ತ್ರ ವಿದ್ಯಾರ್ಥಿ, ₹6.5 ಲಕ್ಷ ನಗದು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:49 IST
Last Updated 20 ಏಪ್ರಿಲ್ 2019, 19:49 IST
ವಿಶ್ವನಾಥ್
ವಿಶ್ವನಾಥ್   

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಗ್ನ ಫೋಟೊ ಹಾಕುವುದಾಗಿ ಪಿಯುಸಿ ವಿದ್ಯಾರ್ಥಿಗೆ ಬ್ಲ್ಯಾಕ್‌ಮೇಲ್ ಮಾಡಿ ₹6.5 ಲಕ್ಷ ನಗದು ಹಾಗೂ 4.5 ಕೆ.ಜಿ ಬೆಳ್ಳಿ ಆಭರಣ ಸುಲಿಗೆ ಮಾಡಿದ್ದ ವಿಶ್ವನಾಥ್ ಅಲಿಯಾಸ್ ಹ್ಯಾಕರ್ ವಿಶ್ವ (21) ರಾಜಾಜಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈತನ ವಿರುದ್ಧ ಸಂತ್ರಸ್ತ ವಿದ್ಯಾರ್ಥಿ ಏ.3ರಂದು ದೂರು ಕೊಟ್ಟಿದ್ದ. ಹಣ ಕೊಡುವುದಾಗಿ ದೂರುದಾರನ ಮೂಲ
ಕವೇ ಕರೆ ಮಾಡಿಸಿದ ಪೊಲೀಸರು, ಹಣ ತೆಗೆದುಕೊಂಡು ಹೋಗಲು ಶ್ರೀರಾಮಪುರದ ಕೃಷ್ಣ ಫ್ಲೋರ್‌ಮಿಲ್ ಬಳಿ ಬಂದಿದ್ದ ವಿಶ್ವನನ್ನು ಸೆರೆ ಹಿಡಿದಿದ್ದಾರೆ.

ಗೆಳತಿ ಖಾತೆ ಹ್ಯಾಕ್: ಸಂತ್ರಸ್ತ ವಿದ್ಯಾರ್ಥಿ ತನ್ನ ಗೆಳತಿ ಜತೆ ‘ಇನ್‌ಸ್ಟಾಗ್ರಾಮ್’ನಲ್ಲಿ ಚಾಟಿಂಗ್ ನಡೆಸಿದ್ದ. ಖಾಸಗಿ ಮಾತುಕತೆ ವೇಳೆ ತನ್ನ ನಗ್ನ ಫೋಟೊಗಳನ್ನೂ ಹಂಚಿಕೊಂಡಿದ್ದ. 2018ರ ನವೆಂಬರ್‌ನಲ್ಲಿ ಆ ಗೆಳತಿಯ ಖಾತೆ ಹ್ಯಾಕ್ ಮಾಡಿದ್ದ ವಿಶ್ವ, ಸಂತ್ರಸ್ತನ ನಗ್ನ ಫೋಟೊಗಳನ್ನು ತೆಗೆದುಕೊಂಡಿದ್ದ.

ADVERTISEMENT

ನಂತರ ಇನ್‌ಸ್ಟಾಗ್ರಾಮ್‌ನಲ್ಲೇ ತಾನೊಂದು ನಕಲಿ ಖಾತೆ ತೆರೆದಿದ್ದ ಆರೋಪಿ, ‘ನಾನು ನಿಮ್ಮ ಸ್ನೇಹಿತನ ಆಪ್ತ ಗೆಳೆಯ. ಆತನ ಮೊಬೈಲ್ ನಂಬರ್ ಕಳೆದು ಹೋಗಿದೆ. ಯಾರಾದರೂ ನಂಬರ್ ಕೊಡಿ. ತುರ್ತಾಗಿ ಮಾತನಾಡಬೇಕಿತ್ತು’ ಎಂದು ಸಂತ್ರಸ್ತನ ಸ್ನೇಹಿತರಿಗೆಲ್ಲ ಸಂದೇಶ ಕಳುಹಿಸಿದ್ದ. ಅವರಲ್ಲಿ ಒಬ್ಬರು ನಂಬರ್ ಕೊಟ್ಟಿದ್ದರು. ಆ ನಂತರದ ದಿನಗಳಿಂದ ಬ್ಲ್ಯಾಕ್‌ಮೇಲ್ ಶುರುವಾಗಿತ್ತು.

‘₹ 10 ಲಕ್ಷ ಕೊಡದಿದ್ದರೆ ನಿನ್ನ ನಗ್ನ ಫೋಟೊಗಳನ್ನು ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್‌ಗಳಲ್ಲಿ ಹಾಕುತ್ತೇನೆ’ ಎಂದು ಬೆದರಿಸಿದ್ದ. ಇದರಿಂದ ಗಾಬರಿಗೆ ಬಿದ್ದ ವಿದ್ಯಾರ್ಥಿ, ‘ನೀನು ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ. ಹೇಗಾದರೂ ಮಾಡಿ ₹50 ಸಾವಿರ ಹೊಂದಿಸುತ್ತೇನೆ’ ಎಂದು ಹೇಳಿದ್ದ. ಅದರಂತೆಯೇ ವಿಶ್ವ ಆತನನ್ನು ಮಾರತ್ತಹಳ್ಳಿಗೆ ಕರೆಸಿಕೊಂಡು ಹಣ ಪಡೆದಿದ್ದ.

ಅಲ್ಲಿಗೇ ನಿಲ್ಲಲಿಲ್ಲ: ಇದೇ ಫೆಬ್ರುವರಿಯಲ್ಲಿ ಪುನಃ ಮಾರತ್ತಹಳ್ಳಿಗೆ ಕರೆಸಿಕೊಂಡು ₹1.5 ಲಕ್ಷ, ಮತ್ತೆ ಶೇಷಾದ್ರಿಪುರದ ಜೆಡಿಎಸ್ ಕಚೇರಿ ಬಳಿ ಕರೆಸಿಕೊಂಡು ₹4 ಲಕ್ಷ ಪಡೆದಿದ್ದ. ಡಿಸೆಂಬರ್‌ನಿಂದ ಫೆಬ್ರುವರಿವರೆಗೆ ₹6.5 ಲಕ್ಷ ಸುಲಿಗೆ ಮಾಡಿದ್ದ ಆರೋಪಿ, ಕೊನೆಗೆ ಸಂತ್ರಸ್ತನ ಮನೆಯಿಂದ 4.5 ಕೆ.ಜಿ ಬೆಳ್ಳಿ ಸಾಮಾನುಗಳನ್ನೂ ತರಿಸಿಕೊಂಡಿದ್ದ. ಹಣಕ್ಕಾಗಿ ಮತ್ತೆ ಪೀಡಿಸಿದ್ದರಿಂದ ವಿದ್ಯಾರ್ಥಿ ಠಾಣೆ ಮೆಟ್ಟಿಲೇರಿದ್ದ.

ಮರ್ಯಾದೆಗೆ ಅಂಜಿದ ಸಂತ್ರಸ್ತ

‘ಸಂತ್ರಸ್ತನ ತಂದೆ ಎಲೆಕ್ಟ್ರಿಕಲ್ ವಸ್ತುಗಳ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಮಗ ಹಣ–ಆಭರಣ ತೆಗೆದುಕೊಂಡು ಹೋಗಿದ್ದ ವಿಚಾರ ಅವರಿಗೂ ಗೊತ್ತಿರಲಿಲ್ಲ. ಮರ್ಯಾದೆಗೆ ಅಂಜಿ ಪೋಷಕರಿಗೂ ಈ ವಿಷಯವನ್ನು ಸಂತ್ರಸ್ತ ತಿಳಿಸಿರಲಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿ ತತ್ವಶಾಸ್ತ್ರ ವಿದ್ಯಾರ್ಥಿ

‘ಕೆಜಿ‍ಎಫ್‌ ತಾಲ್ಲೂಕಿನ ಬೇತಮಂಗಲ ಸಮೀಪದ ಜಿ.ಹುಲ್ಕೂರು ಗ್ರಾಮದ ವಿಶ್ವ, ವರ್ಷದ ಹಿಂದೆ ನಗರಕ್ಕೆ ಬಂದು ವರ್ತೂರಿನಲ್ಲಿ ನೆಲೆಸಿದ್ದ. ಪದವಿ ಮುಗಿಸಿದ್ದ ಆತ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ತತ್ವಶಾಸ್ತ್ರ ವಿಷಯದಲ್ಲಿ ಅಭ್ಯಾಸ ಮಾಡುತ್ತಿದ್ದ. ಸುಲಿಗೆಯಿಂದ ಸಂಪಾದಿಸಿದ್ದ ಹಣದಲ್ಲೇ ಆರೋಪಿ ಮನೆ ಭೋಗ್ಯಕ್ಕೆ ಪಡೆದಿದ್ದ. ಪ್ರತಿ ಬಾರಿಯೂ ಹೆಲ್ಮೆಟ್ ಹಾಕಿಕೊಂಡೇ ಹಣ ಪಡೆಯಲು ಹೋಗಿದ್ದರಿಂದ ಸಂತ್ರಸ್ತ ಈತನ ಮುಖವನ್ನೂ ನೋಡಿರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.