ADVERTISEMENT

ಒಂಟಿ ಮಹಿಳೆಯರ ಸುಲಿಗೆ: ಆರೋಪಿ ಬಂಧನ

ಜಾಲ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:20 IST
Last Updated 24 ಜನವರಿ 2020, 23:20 IST
ಒಂಟಿ ಮಹಿಳೆಯರ ಸುಲಿಗೆ: ಆರೋಪಿಯ ಬಂಧನ
ಒಂಟಿ ಮಹಿಳೆಯರ ಸುಲಿಗೆ: ಆರೋಪಿಯ ಬಂಧನ   

ಬೆಂಗಳೂರು: ರಸ್ತೆಯಲ್ಲಿ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಆರೋಪಿ ಜಿ. ಕಾರ್ತಿಕ್ ಅಲಿಯಾಸ್ ಜಾಕ್‌ ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

‘ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಿದ್ದ ಆರೋಪಿ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ. ಆತನಿಂದ ₹ 2.39 ಲಕ್ಷ ಮೌಲ್ಯದ ಆಭರಣ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಡಿಸೆಂಬರ್ 29ರಂದು ಮಹಿಳೆಯೊಬ್ಬರನ್ನು ಹಿಂಬಾಲಿಸಿದ್ದ ಆರೋಪಿ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ. ಆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಸೆರೆ ಹಿಡಿಯಲಾಗಿದೆ’ ಎಂದರು.

ADVERTISEMENT

‘ಸುಲಿಗೆ ಮಾಡಲೆಂದೇ ಆರೋಪಿ ಮೈಸೂರು ಜಿಲ್ಲೆಯ ಮೇಟಗಳ್ಳಿ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ. ಅದನ್ನೂ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

**
ಬಾಂಗ್ಲಾದ ಇಬ್ಬರು ಮಹಿಳೆಯರ ರಕ್ಷಣೆ
ಬೆಂಗಳೂರು: ಬಾಗಲೂರು ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ.

‘ಕೆಲಸ ಕೊಡಿಸುವುದಾಗಿ ಹೇಳಿ ಬಾಂಗ್ಲಾದೇಶದ ಇಬ್ಬರು ಮಹಿಳೆಯರನ್ನು ನಗರಕ್ಕೆ ಕರೆಸಿಕೊಂಡು ಅವರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ, ಮಹಿಳೆಯರನ್ನು ರಕ್ಷಿಸಲಾಗಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳಾದ ಚನ್ನಸಂದ್ರದ ಅಶ್ರಫ್, ಬಾಂಗ್ಲಾದೇಶದ ಮೊಹಮ್ಮದ್ ಹುಸೇನ್ ಹಾಗೂದೆಹಲಿಯ ಮಹಿಳೆಯನ್ನು ಬಂಧಿಸಲಾಗಿದೆ’ ಎಂದರು.

**
ಬಾಂಗ್ಲಾ ದೇಶದ ಮಹಿಳೆ ಬಂಧನ
ಬೆಂಗಳೂರು:
ಇತ್ತೀಚೆಗಷ್ಟೇ ಬಾಂಗ್ಲಾ ದೇಶದ ಮೂವರು ಪ್ರಜೆಗಳನ್ನು ಬಂಧಿಸಿದ್ದ ಮಾರತ್ತಹಳ್ಳಿ ಠಾಣೆ ಪೊಲೀಸರು ಶುಕ್ರವಾರ ಮತ್ತೊಬ್ಬ ಮಹಿಳೆ ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಕಾಡುಬೀಸನಹಳ್ಳಿ ಸಮೀಪ ಅಕ್ರಮವಾಗಿ ವಾಸವಿದ್ದ ಬಾಂಗ್ಲಾ ದೇಶದ ನರ್ಗೀಸ್ ಬೇಗಂ (45) ಬಂಧಿತರು.

‘ಬಾಂಗ್ಲಾದೇಶದ ಬಾಗೇರ್‌ಹಟ್ ಜಿಲ್ಲೆಯ ನರ್ಗೀಸ್ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಠಾಣೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ನಿರ್ಮಿಸಿದ್ದ ಜೋಪಡಿಯೊಂದರಲ್ಲಿ ಉಳಿದುಕೊಂಡಿದ್ದರು. ಸ್ಥಳೀಯರೊಬ್ಬರು ನೀಡಿದ ಮಾಹಿತಿಯಂತೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಾನು ಬಾಂಗ್ಲಾದೇಶದ ಪ್ರಜೆ ಎಂಬುದನ್ನು ಒಪ್ಪಿಕೊಂಡಿರುವ ನರ್ಗೀಸ್, ಅಕ್ರಮವಾಗಿ ಗಡಿ ದಾಟಿ ರೈಲಿನ ಮೂಲಕ ಬೆಂಗಳೂರಿಗೆ ಬಂದಿ ರುವುದಾಗಿ ಹೇಳಿಕೆ ನೀಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಗಿಯೂ ತಿಳಿಸಿದ್ದಾರೆ. ಸದ್ಯ ಆಕೆ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ತಿಳಿಸಿದರು.

**
ಇಬ್ಬರ ಬಂಧನ
ದಾಬಸ್ ಪೇಟೆ: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ತ್ಯಾಮಗೊಂಡ್ಲು ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಕ್ಕೇನಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಹನುಮಂತರಾಜು ಬಂಧಿತರು.

ಎಆರ್‌ಸಿ ಉಗ್ರಾಣದ ಹತ್ತಿರ ಈ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪಿ ಶ್ರೀನಿವಾಸನ ಬಳಿ 14 ಹಾಗೂ ಗ್ರಾಮದ ಪೆಟ್ಟಿಗೆ ಅಂಗಡಿ ಯಲ್ಲಿ ಮಾರಾಟ ಮಾಡುತ್ತಿದ್ದ ಹನುಮಂತರಾಜು ಹತ್ತಿರ 32 ಟೆಟ್ರಾ ವಿಸ್ಕಿ ಪ್ಯಾಕೆಟ್‌ಗಳನ್ನು ವಶಪಡಿಸಿ
ಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.