ADVERTISEMENT

ಇರಾನಿ ಗ್ಯಾಂಗ್‌ನ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 20:27 IST
Last Updated 29 ಡಿಸೆಂಬರ್ 2020, 20:27 IST

ಬೆಂಗಳೂರು: ನಗರದಲ್ಲಿ ಬೈಕ್‌ನಲ್ಲಿ ಓಡಾಡಿ ಸರಗಳವು ಮಾಡುತ್ತಿದ್ದ ಆರೋಪದಡಿ ಇರಾನಿ ಗ್ಯಾಂಗ್‌ನ ಮೂವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

’ಧಾರವಾಡ ಟೋಲ್‌ನಾಕಾ ಬಳಿಯ ಇರಾನಿ ಕಾಲೊನಿಯಲ್ಲಿ ವಾಸವಿದ್ದ ಸಲೀಂ ಇರಾನಿ, ಆಜಾದ್ ಇರಾನಿ ಹಾಗೂ ಅವ್ನೂ ಇರಾನಿ ಬಂಧಿತರು. ಅವರಿಂದ ₹ 50 ಲಕ್ಷ ಮೌಲ್ಯದ 1 ಕೆ.ಜಿ 20 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ವಾಯುವಿಹಾರಕ್ಕೆ ಹೋಗುತ್ತಿದ್ದ ಹಾಗೂ ಮನೆ ಎದುರು ಓಡಾಡುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಮಾಗಡಿ ರಸ್ತೆ, ಬ್ಯಾಡರಹಳ್ಳಿ, ಚಂದ್ರಾ ಲೇಔಟ್, ವಿಜಯನಗರ, ಜ್ಞಾನಭಾರತಿ, ಕಾಟನ್‌ಪೇಟೆ, ರಾಮಮೂರ್ತಿನಗರ, ಯಲಹಂಕ, ಹೆಣ್ಣೂರು, ಸುಬ್ರಹ್ಮಣ್ಯನಗರ, ಬಾಣಸವಾಡಿ, ಕೊಡಿಗೇಹಳ್ಳಿ, ಬೆಳ್ಳಂದೂರು, ಬಾಗಲೂರು, ಬನಶಂಕರಿ, ವಿದ್ಯಾರಣ್ಯಪುರ, ಜಗಜೀವನರಾಮನಗರ ಠಾಣೆ ವ್ಯಾಪ್ತಿಯಲ್ಲಿ 27 ಮಹಿಳೆಯರ ಸರಗಳನ್ನು ಆರೋಪಿಗಳು ಕಳವುಮಾಡಿದ್ದರು. ಇವರ ವಿರುದ್ಧ ಧಾರವಾಡದ ವಿದ್ಯಾಗಿರಿ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿದ್ದವು’ ಎಂದೂ ತಿಳಿಸಿದರು.

ADVERTISEMENT

‘15 ದಿನಕ್ಕೊಮ್ಮೆ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಸರಗಳವು ಮಾಡಿಕೊಂಡು ಧಾರವಾಡಕ್ಕೆಹೋಗುತ್ತಿದ್ದರು. ಸಂಬಂಧಿಕ ಮಹಿಳೆಯರಿಗೆ ಚಿನ್ನದ ಸರಗಳನ್ನು ಕೊಟ್ಟು, ಅವರಿಂದಲೇ ಮಾರಾಟ ಮಾಡಿಸುತ್ತಿದ್ದರು. ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು.’

‘ಆರೋಪಿ ಸಲೀಂ ಇರಾನಿ ವಿರುದ್ಧ ಆಂಧ್ರಪ್ರದೇಶದಲ್ಲೂ ಪ್ರಕರಣಗಳು ದಾಖಲಾಗಿವೆ. ಈ ಇರಾನಿ ಗ್ಯಾಂಗ್‌ನ ಕೃತ್ಯವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ವಿಜಯನಗರ ಉಪವಿಭಾಗ ಪೊಲೀಸರ ತಂಡಕ್ಕೆ ₹ 50 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ’ ಎಂದೂ ಸಂಜೀವ್ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.