ಬೆಂಗಳೂರು: ನಗರದಲ್ಲಿ ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾದ ಪೆಪೆ ಬಂಧಿತ ಆರೋಪಿ.
ಆರೋಪಿಯಿಂದ ಮೂರು ಕೆ.ಜಿ ಎಂಡಿಎಂಎ ಕ್ರಿಸ್ಟಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ ₹3 ಕೋಟಿ ಆಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.
ದಾಸರಹಳ್ಳಿಯ ನಾರ್ಥ್‌ಹಿಲ್ಸ್ ಶಾಲೆ ಹಿಂಭಾಗದ ಖಾಲಿ ಪ್ರದೇಶದಲ್ಲಿ ವಿದೇಶಿ ಪ್ರಜೆಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ ಆಯಿತು. ಆರೋಪಿ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ ಅಡಿ(ಎನ್‌ಡಿಪಿಎಸ್) ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಆರೋಪಿ 2023ರಲ್ಲಿ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಎಲ್ಲಿಯೂ ಉತ್ತಮ ಕೆಲಸ ದೊರೆಯದ ಕಾರಣಕ್ಕೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಆಸೆಯಿಂದ ಡ್ರಗ್ಸ್ ಮಾರಾಟ ದಂಧೆಗೆ ಇಳಿದಿದ್ದ. ಮತ್ತೊಬ್ಬ ವಿದೇಶಿ ಪ್ರಜೆ ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿ ನೆಲಸಿದ್ದ. ಆತನಿಂದ, ಆರೋಪಿ ಪೆಪೆ ಎಂಡಿಎಂಎ ಕ್ರಿಸ್ಟಲ್ ಅನ್ನು ಖರೀದಿಸಿ ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಹೇಳಿದರು.
‘ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಎಂಜಿನಿಯರ್, ಪೇಯಿಂಗ್ ಗೆಸ್ಟ್ ನಿವಾಸಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ’ ಎಂದು ಹೇಳಿದರು.
‘ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.