ADVERTISEMENT

ಸಂಬಂಧಿಯನ್ನೇ ಕೊಲ್ಲಲು ₹10 ಲಕ್ಷಕ್ಕೆ ಸುಪಾರಿ; ಆರೋಪಿಗಳ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 5:36 IST
Last Updated 26 ಜುಲೈ 2020, 5:36 IST
ಆರೋಪಿಗಳಾದ ಅರುಣ್ ಮತ್ತು ಭರತ್
ಆರೋಪಿಗಳಾದ ಅರುಣ್ ಮತ್ತು ಭರತ್   

ಬೆಂಗಳೂರು: ಹೆಸರಘಟ್ಟದಲ್ಲಿ ರಾಜಶೇಖರ್ ಎಂಬುವರ ಪತ್ನಿ ಮೇಲೆ ಜುಲೈ 23ರಂದು ಹಲ್ಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಭಾನುವಾರ ಸೆರೆ ಹಿಡಿದಿದ್ದಾರೆ.

ನಾಗಶೆಟ್ಟಿಹಳ್ಳಿಯ ಅರುಣ್‌ಕುಮಾರ್ ಹಾಗೂ ದೊಡ್ಡಬಳ್ಳಾಪುರದ ಭರತ್ ಬಂಧಿತ ಆರೋಪಿಗಳು. ಇವರ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.

‘3 ಗುಂಟೆ ಆಸ್ತಿ ವಿಚಾರವಾಗಿ ರಾಜಶೇಖರ್ ಅವರನ್ನು ಹತ್ಯೆ ಮಾಡಲು ಸಂಬಂಧಿಕರೇ ₹10 ಲಕ್ಷಕ್ಕೆ ಸುಪಾರಿ ನೀಡಿದ್ದರು. ಮುಂಗಡವಾಗಿ ಆರೋಪಿಗಳಿಗೆ ₹1 ಲಕ್ಷ ನೀಡಿದ್ದರು’ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.

ಹಣ ಪಡೆದಿದ್ದ ಆರೋಪಿಗಳ ತಂಡ, ರಾಜಶೇಖರ್ ಹಾಗೂ ಅವರ ಪತ್ನಿ ಹೊರಟಿದ್ದ ಬೈಕ್‌ಗೆ ಕಾರು ಗುದ್ದಿಸಿ ಹಲ್ಲೆ ಮಾಡಲು ಮುಂದಾಗಿತ್ತು. ಸ್ಥಳದಲ್ಲಿ ಸ್ಥಳೀಯರು ಹೆಚ್ಚು ಜಮಾಯಿಸಿದ್ದರಿಂದ ರಾಜಶೇಖರ್ ಅವರನ್ನು ಕೊಲೆ ಮಾಡಲು ಸಾಧ್ಯವಾಗಿರಲಿಲ್ಲ. ಆರೋಪಿಗಳು ಬೆದರಿಕೆ ಹಾಕಿ ಪರಾರಿಯಾಗಿದ್ದರು. ಈ ಬಗ್ಗೆ ರಾಜಶೇಖರ್ ನೀಡಿದ್ದ ದೂರಿನನ್ವಯ ಸೋಲದೇವನಳ್ಳಿ ಠಾಣೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆದಿತ್ತು.

‘ಜಾಲಹಳ್ಳಿ ಬಳಿ ಆರೋಪಿಗಳಿರುವ ಮಾಹಿತಿ ಸಿಕ್ಕಿತ್ತು. ಭಾನುವಾರ ನಸುಕಿನಲ್ಲಿ ಪೊಲೀಸರ ತಂಡ, ಸ್ಥಳಕ್ಕೆ ಹೋಗಿತ್ತು. ಪೊಲೀಸರ ಮೇಲೆಯೇ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿದರು. ಇಬ್ಬರು ಹೆಡ್ ಕಾನ್‌ಸ್ಟೆಬಲ್ ಗಾಯಗೊಂಡರು. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದರು. ಆರೋಪಿಗಳನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ’ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.