ADVERTISEMENT

ಕೆ.ಜಿ.ಹಳ್ಳಿ ಯುವತಿಗೆ ವಂಚನೆ: ನಾಲ್ಕು ಮದುವೆಯಾದ ಶಿಕ್ಷಕ ಜೈಲುಪಾಲು

ಆರೋಪಿ ಅಮಾನುಲ್ಲಾ ಪಾಷಾ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:16 IST
Last Updated 28 ಮೇ 2019, 20:16 IST
ಅಮಾನುಲ್ಲಾ
ಅಮಾನುಲ್ಲಾ   

ಬೆಂಗಳೂರು: ಆತ ದುಬೈನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಗ್ಲಿಷ್ ಶಿಕ್ಷಕ. 29ನೇ ವಯಸ್ಸಿನಲ್ಲೇ ಮೂರು ಮದುವೆಯಾಗಿ ಪತ್ನಿಯರ ಜೊತೆ ಕೆಲ ವರ್ಷ ಕಳೆದು, ನಂತರ ದೂರ ಮಾಡಿದ್ದ. ಇದೀಗ ನಾಲ್ಕನೇ ಮದುವೆಯಾಗಿ ಜೈಲು ಪಾಲಾಗಿದ್ದಾನೆ.

ಮೂರು ಮದುವೆ ಆಗಿದ್ದ ವಿಷಯ ಮುಚ್ಚಿಟ್ಟು ನಾಲ್ಕನೇ ಮದುವೆ ಆಗಿ ಕೆ.ಜಿ.ಹಳ್ಳಿಯ ಯುವತಿ ಹಾಗೂ ಅವರ ಪೋಷಕರನ್ನು ವಂಚಿಸಿದ ಆರೋಪದಡಿ ಅಮಾನುಲ್ಲಾ ಬಾಷಾ (29) ಹಾಗೂ ಮದುವೆಗೆ ಸಹಕರಿಸಿದ್ದ ಆರೋಪದಡಿ ಆತನ ತಂದೆ ಬಾಷಾ ಹಾಗೂ ಸಂಬಂಧಿ ಜಾಕೀರ್‌ ಹುಸೇನ್‌ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಅಮಾನುಲ್ಲಾ, ಕೆಲ ವರ್ಷಗಳ ಹಿಂದೆ ದುಬೈಗೆ ಹೋಗಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆಗಾಗ ದೇಶಕ್ಕೆ ಬರುತ್ತಿದ್ದ ಆತ, ವರದಕ್ಷಿಣೆ ಆಸೆಗಾಗಿ ಮೇಲಿಂದ ಮೇಲೆ ಮದುವೆಯಾಗಿ ಯುವತಿ ಹಾಗೂ ಅವರ ಮನೆಯವರನ್ನು ವಂಚಿಸಿ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿಯನ್ನು ಮದುವೆಯಾಗಿದ್ದ ಯುವತಿಯರು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ವಾಸವಿದ್ದಾರೆ. ಮೂವರೂ ಪತ್ನಿಯರನ್ನು ಸಂಪರ್ಕಿಸಿ ಹೇಳಿಕೆ ಪಡೆಯುವ ಕೆಲಸ ನಡೆದಿದೆ’ ಎಂದರು.

ಮದುವೆಯಾದ ಮೂರೇ ದಿನಕ್ಕೆ ವಂಚನೆ ಬಯಲು: ‘ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಆರೋಪಿ, ತನಗೆ ₹ 1.25 ಲಕ್ಷ ಸಂಬಳವಿರುವುದಾಗಿ ಹೇಳಿಕೆ.ಜಿ.ಹಳ್ಳಿ ನಿವಾಸಿಯೊಬ್ಬರ 22 ವರ್ಷದ ಮಗಳನ್ನು ನೋಡಿದ್ದ. ಆತನ ಮಾತು ನಂಬಿದ್ದ ಪೋಷಕರು, ಯುವತಿಯನ್ನು ಮೇ 23ರಂದು ಅದ್ಧೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಯುವತಿಯ ಸಂಬಂಧಿಕರು ಮದುವೆ ಫೋಟೊಗಳನ್ನು ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆ ಫೋಟೊ ನೋಡಿ ಮೇ 25ರಂದು ಪೋಷಕರಿಗೆ ಕರೆ ಮಾಡಿದ್ದ ತಮಿಳುನಾಡಿನ ಸಂಬಂಧಿಕರು, ‘ಅಮಾನುಲ್ಲಾ ವಂಚಕ. ಈಗಾಗಲೇ ಮೂರು ಮದುವೆಯಾಗಿದ್ದಾನೆ’ ಎಂದು ಹೇಳಿದ್ದರು.’

‘ಗಾಬರಿಗೊಂಡ ಪೋಷಕರು, ಕೆಲ ಸಂಬಂಧಿಕರ ಬಳಿ ವಿಚಾರಿಸಿದಾಗ ಆತನ ನಿಜಬಣ್ಣ ಗೊತ್ತಾಗಿತ್ತು. ಠಾಣೆಗೆ ಬಂದು ದೂರು ನೀಡಿದ್ದರು. ತಮಿಳುನಾಡಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲೇ ಆರೋಪಿ ಹಾಗೂ ಆತನ ತಂದೆಯನ್ನು ಬಂಧಿಸಲಾಯಿತು. ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

‘ನಾಲ್ಕನೇ ಮದುವೆಯಾಗಿರುವ ಆರೋಪಿ, ಐದನೇ ಮದುವೆಗೂ ಯುವತಿಯೊಬ್ಬರನ್ನು ನೋಡಿದ್ದ ಎಂಬ ಮಾಹಿತಿ ಇದೆ. ಅದನ್ನು ಪರಿಶೀಲಿಸುತ್ತಿದ್ದೇವೆ. ಜೊತೆಗೆ, ಯಾರಾದರೂ ಆರೋಪಿಯಿಂದ ವಂಚನೆಗೀಡಾಗಿದ್ದರೆ ಠಾಣೆಗೆ ಬಂದು ದೂರು ನೀಡಬಹುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.