ADVERTISEMENT

ಕಂಪನಿ ವಹಿವಾಟಿನ ಬಗ್ಗೆ ತಪ್ಪು ಲೆಕ್ಕ ತೋರಿಸಿ ಕೋಟಿ ವಂಚನೆ: ಬಂಧನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 1:55 IST
Last Updated 13 ಆಗಸ್ಟ್ 2021, 1:55 IST
ಅನಿಲ್‌ಕುಮಾರ್
ಅನಿಲ್‌ಕುಮಾರ್   

ಬೆಂಗಳೂರು: ಕೆಲಸಕ್ಕಿದ್ದ ಕಂಪನಿ ವಹಿವಾಟಿನ ಬಗ್ಗೆ ತಪ್ಪು ಲೆಕ್ಕ ತೋರಿಸಿ ಸುಮಾರು ₹ 1 ಕೋಟಿ ತನ್ನದಾಗಿಸಿಕೊಂಡು ವಂಚಿಸಿದ್ದ ಆರೋಪದಡಿ ಅನಿಲ್‌ಕುಮಾರ್ (27) ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಚಿಕ್ಕಮಗಳೂರಿನ ಅನಿಲ್‌ಕುಮಾರ್, ಬಿ.ಕಾಂ. ಪದವೀಧರ. ಜೆ.ಪಿ.ನಗರ ಬಳಿಯ ಶಾಖಾಂಬರಿ ನಗರದಲ್ಲಿರುವ ‘ಸಿದ್ದಾರ್ಥ್ ಇಂಟೀರಿಯರ್ಸ್’ ಕಂಪನಿಯಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ. ದೊಡ್ಡಕಲ್ಲಸಂದ್ರದಲ್ಲಿ ನೆಲೆಸಿದ್ದ. ಕಂಪನಿ ಮಾಲೀಕರು ನೀಡಿದ್ದ ದೂರು ಆಧರಿಸಿ ಆತನನ್ನು ಬಂಧಿಸಲಾಗಿದೆ. ಆತನಿಂದ ಕಾರು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಒಳಾಂಗಣ ವಿನ್ಯಾಸ ವಸ್ತುಗಳ ಹಂಚಿಕೆ ಕೆಲಸವನ್ನು ಕಂಪನಿ ಮಾಡುತ್ತಿದೆ. ನಿತ್ಯವೂ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ಅದರ ಲೆಕ್ಕವನ್ನು ಆರೋಪಿ, ಕಂಪ್ಯೂಟರ್‌ ಸಾಫ್ಟ್‌ವೇರ್‌ನಲ್ಲಿ ದಾಖಲಿಸುತ್ತಿದ್ದ.’

ADVERTISEMENT

‘ವ್ಯಾಪಾರಿಗಳು ಹಾಗೂ ಗ್ರಾಹಕರು ನೀಡುತ್ತಿದ್ದ ಹಣವನ್ನು ಜೇಬಿಗೆ ಹಾಕಿಕೊಳ್ಳುತ್ತಿದ್ದ ಆರೋಪಿ, ನಕಲಿ ಚೆಕ್ ಹಾಗೂ ನಕಲಿ ಆರ್‌ಟಿಜಿಎಸ್/ನೆಫ್ಟ್ ಮೂಲಕ ತಪ್ಪು ಲೆಕ್ಕ ದಾಖಲು ಮಾಡುತ್ತಿದ್ದ. 2019ರಿಂದಲೇ ಕೃತ್ಯ ಎಸಗುತ್ತಿದ್ದ ಆರೋಪಿ ₹ 1 ಕೋಟಿ ವಂಚಿಸಿರುವುದಾಗಿ ಮಾಲೀಕರು ದೂರಿನಲ್ಲಿ ಹೇಳಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

‘ಮಾಲೀಕರು ಕಚೇರಿಯಲ್ಲಿರುವ ವೇಳೆಯಲ್ಲೇ ವ್ಯಾಪಾರಿಯೊಬ್ಬರು ₹ 1 ಲಕ್ಷ ತಂದು ಕೊಟ್ಟಿದ್ದರು. ಅದನ್ನು ಜೇಬಿಗೆ ಇಳಿಸಿದ್ದ ಆರೋಪಿ, ತಪ್ಪು ಲೆಕ್ಕ ಬರೆದಿದ್ದ. ಅದನ್ನು ಗಮನಿಸಿದ್ದ ಮಾಲೀಕ, ಬೇರೊಬ್ಬ ಲೆಕ್ಕಿಗರ ಮೂಲಕ ಪರಿಶೀಲನೆ ನಡೆಸಿದ್ದರು. ಅವಾಗಲೇ ಆರೋಪಿ ಕೃತ್ಯ ಬಯಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಬೇಕರಿ ತೆರೆದಿದ್ದ ಆರೋಪಿ: ‘ಕಂಪನಿ ವಂಚಿಸಿ ಗಳಿಸಿದ್ದ ಹಣದಲ್ಲಿ ಆರೋಪಿ, ಆರ್‌.ಟಿ.ನಗರದಲ್ಲಿ ಬೇಕರಿ ತೆರೆದಿದ್ದ. ಐಷಾರಾಮಿ ಕಾರು, ಬೈಕ್‌ಗಳು ಹಾಗೂ ಚಿಕ್ಕಮಗಳೂರಿನಲ್ಲಿ ಅಡಿಕೆ ತೋಟ ಖರೀದಿಸಿದ್ದ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.