ಬೆಂಗಳೂರು: ಜಪಾನಿನ ಕೋಯಿ ಫಿಶ್‌ಗಳ ಕೊಳ, ಅಮೆಜಾನ್ ನದಿಯಲ್ಲಿ ಕಂಡುಬರುವ ಪಿರಾನ ಮೀನುಗಳು, ಅಂತರರಾಷ್ಟ್ರೀಯ ಮಟ್ಟದ ಸುರಂಗ (ಟನಲ್) ಅಕ್ವೇರಿಯಂ, ಸಮುದ್ರದ ತರಹೇವಾರಿ ಆಲಂಕಾರಿಕ ಮೀನುಗಳು.. ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡುವ ಅವಕಾಶವನ್ನು ನಮ್ಮ ಬೆಂಗಳೂರು ಅಕ್ವೇರಿಯಂ ಸಂಸ್ಥೆ ಒದಗಿಸಿದೆ.
ಇದು ಕಸ್ತೂರಬಾ ರಸ್ತೆಯ ಕಬ್ಬನ್ ಉದ್ಯಾನದ ಆವರಣದಲ್ಲಿ ಹೊಸ ರೂಪದೊಂದಿಗೆ ಕಂಗೊಳಿಸುತ್ತಿರುವ ‘ಸರ್ಕಾರಿ ಮತ್ಸ್ಯಾಲಯ’. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ‘ನಮ್ಮ ಬೆಂಗಳೂರು ಅಕ್ವೇರಿಯಂ’ ಎಂಬ ಖಾಸಗಿ ಸಂಸ್ಥೆ ಹಳೆಯ ಸರ್ಕಾರಿ ಮತ್ಸ್ಯಾಲಯಕ್ಕೆ ಆಧುನಿಕ ಸ್ಪರ್ಶ ನೀಡಿದೆ. ಪ್ರದರ್ಶನದಲ್ಲಿ 110ಕ್ಕೂ ಹೆಚ್ಚಿನ ಆಲಂಕಾರಿಕ ಮೀನುಗಳಿವೆ. ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ಪ್ರದರ್ಶನಕ್ಕಿಟ್ಟಿರುವ ವೈವಿಧ್ಯಮಯ ಸಾಕಾಣಿಕೆ ಮೀನುಗಳ ಕುರಿತು ಕುತೂಹಲಕರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಟನಲ್ ಅಕ್ವೇರಿಯಂ: ಕಟ್ಟಡದ ಆವರಣದಲ್ಲಿ 75 ಸಾವಿರ ಲೀಟರ್ ಸಾಮರ್ಥ್ಯದ ಉಪ್ಪು ನೀರಿನ ಅಂತರರಾಷ್ಟ್ರೀಯ ಮಟ್ಟದ ಟನಲ್ ನಿರ್ಮಿಸಲಾಗಿದೆ. ಇದರಲ್ಲಿ ವಿವಿಧ ಜಾತಿಯ ಆಲಂಕಾರಿಕ ಮೀನುಗಳಿವೆ. ಇದು ನೋಡುಗರ ಆಕರ್ಷಣೀಯ ಕೇಂದ್ರವಾಗಿದೆ. ಸುರಂಗ ಪ್ರವೇಶಿದವರಿಗೆ, ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಾಳಕ್ಕೆ ಇಳಿಯುವವರಿಗೆ ಆಗುವಂತಹ ಅನುಭವ ಸಿಗುತ್ತದೆ. ಒಂದು ರೀತಿ ಸಮುದ್ರದ ಆಳದಲ್ಲಿದ್ದಂತೆಯೇ ಭಾಸವಾಗುತ್ತದೆ. ಇದು ಕರ್ನಾಟಕದಲ್ಲಿ ಮೊದಲನೇ ಶಾಶ್ವತ ಟನಲ್ ಅಕ್ವೇರಿಯಂ ಆಗಿದೆ’ ಎಂದು ನಮ್ಮ ಬೆಂಗಳೂರು ಅಕ್ವೇರಿಯಂ ಸಂಸ್ಥೆಯ ನಿರ್ದೇಶಕ ಪ್ರಣವ್ ಹೇಳಿದರು.
ಕೋಯಿ ಫಿಶ್ ಕೊಳ: ಮತ್ಸ್ಯಾಲಯದ ಹಿಂಭಾಗದಲ್ಲಿ 90 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಪಾನ್ ಕೋಯಿ ಫಿಶ್‌ಗಳ ಕೊಳವನ್ನು ನಿರ್ಮಿಸಲಾಗಿದೆ. ಇದರಲ್ಲಿ ಬಣ್ಣದ ಬಣ್ಣದ ಕೋಯಿ ಫಿಶ್‌ಗಳನ್ನು ವೀಕ್ಷಿಸಬಹುದು, ಅವುಗಳಿಗೆ ಆಹಾರ ನೀಡುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಅಲ್ಲೇ ಮೀನುಗಳಿಗೆ ಆಹಾರ ಖರೀದಿಸಬೇಕು. ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಫಲಕಗಳಲ್ಲಿ ಅಳವಡಿಸಲಾಗಿದೆ.
ಮತ್ಸ್ಯಾಲಯದ ಒಂದನೇ ಅಂತಸ್ತಿನಲ್ಲಿ ನೇಚರ್ ಮತ್ತು ಮರೀನ್ ಅಕ್ವೇರಿಯಂಗಳಲ್ಲಿ ಸಹ್ಯಾದ್ರಿಯ ನೇತ್ರಾಣಿ ದ್ವೀಪಗಳಲ್ಲಿರುವ ಮೀನಿನ ಪ್ರಬೇಧಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆಲಂಕಾರಿಕ ಮೀನುಗಳಿಗೆ ಬೇಕಾಗಿರುವ ನೈಸರ್ಗಿಕ ಪರಿಸರವನ್ನು ನಿರ್ಮಿಸಲಾಗಿದೆ. ಪ್ರತಿ ಅಕ್ವೇರಿಯಂ ಮೇಲ್ಭಾಗದಲ್ಲಿ ಪ್ರದರ್ಶಿಸಿರುವ ಮೀನುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಫಲಕಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಪ್ರೇರಕ್ಷರಿಗೆ ಮೀನುಗಳು ಹಾಗೂ ಸಸ್ಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಎರಡನೇ ಅಂತಸ್ತಿನಲ್ಲಿ ವಿದೇಶಿ ಆಲಂಕಾರಿಕ ಮೀನುಗಳಿರುವ 60ಕ್ಕೂ ಹೆಚ್ಚು ವೈವಿಧ್ಯಮಯ ಅಕ್ವೇರಿಯಂಗಳಿವೆ. ಇದು ಮಕ್ಕಳಿಗೆ ಹೆಚ್ಚು ಖುಷಿ ಕೊಡುವ ತಾಣ. ಸಮುದ್ರದ ಆಳದಲ್ಲಿನ ಪರಿಸರವನ್ನು ಈ ಚಿಕ್ಕ ಚಿಕ್ಕ ಅಕ್ವೇರಿಯಂಗಳಲ್ಲಿ ನಿರ್ಮಿಸಲಾಗಿದೆ. ಆಯಾ ಪರಿಸರಕ್ಕೆ ಹೊಂದಿಕೊಳ್ಳುವಂತಹ ಮೀನುಗಳನ್ನು ಅದರಲ್ಲಿ ಪ್ರದರ್ಶಿಸಲಾಗಿದೆ. ಇದರ ಮಧ್ಯ ಭಾಗದಲ್ಲಿ ಒಂದು ಚಿಕ್ಕದಾದ ಕೃತಕ ಜಲಪಾತ ನಿರ್ಮಿಸಲಾಗಿದ್ದು, ಪ್ರೇಕ್ಷಕರು ಇದರ ಮುಂಭಾಗದಲ್ಲಿ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುತ್ತಾರೆ.
ಸಾರ್ವಜನಿಕರು ಏನಂತಾರೆ?
ಮತ್ಸ್ಯಾಲಯದಲ್ಲಿನ ಸುರಂಗವು ಸಮುದ್ರದಾಳದ ಅನುಭವ ನೀಡುತ್ತದೆ. ನಾನು, ಇಲ್ಲಿ ಬಗೆ ಬಗೆಯ ಆಲಂಕಾರಿಕ ಮೀನುಗಳನ್ನು ನೋಡಿದೆ. ಜೊತೆಗೆ ಅವುಗಳಿಗೆ ಸಂಬಂಧಿಸಿದ ಮಾಹಿತಿಯೂ ಲಭ್ಯವಾಯಿತು. ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಇಲ್ಲಿಗೆ ಭೇಟಿ ನೀಡಬಹುದು.– ರಂಜಿತಾ, ಚಾಮರಾಜನಗರ
ಸಮುದ್ರದಲ್ಲಿ ಸ್ಕೂಬಾ ಡ್ರೈವಿಂಗ್ ಮಾಡಲು ಆಗದವರು ಇಲ್ಲಿಗೆ ಭೇಟಿ ನೀಡಿದರೆ, ಅದರ ಅನುಭವ ಪಡೆದುಕೊಳ್ಳಬಹುದು. ಸಮುದ್ರದ ಜೀವಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇದೊಂದು ಅದ್ಭುತ ತಾಣ.– ಹರ್ಷಿತಾ, ಬನಶಂಕರಿ
ಇಲ್ಲಿರುವ ಪಿರಾನ ಮೀನುಗಳ, ಜೆಲ್ಲಿ ಫಿಶ್, ವಿವಿಧ ಆಲಂಕಾರಿಕ ಮೀನುಗಳನ್ನು ಒಂದೇ ವೇದಿಕೆಯಲ್ಲಿ ನೋಡಬಹುದು. ಮೀನು ಸಾಕಾಣಿಕೆ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಲು ಇಲ್ಲಿ ತರಬೇತಿ ನೀಡಲಾಗುತ್ತದೆ. ಪ್ರತಿಯೊಬ್ಬರು ಇಲ್ಲಿಗೆ ಒಮ್ಮೆ ಭೇಟಿ ನೀಡಬೇಕು.– ಸಂಜು, ಐಟಿ ಉದ್ಯೋಗಿ
ಪ್ರವೇಶ ಶುಲ್ಕದ ವಿವರ
ಮೂರು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ
3 ವರ್ಷದಿಂದ 16 ವರ್ಷದೊಳಗಿನ ಮಕ್ಕಳಿಗೆ ವಾರದ ದಿನಗಳಲ್ಲಿ ₹ 30, ವಾರಾಂತ್ಯದಲ್ಲಿ ₹ 47
ವಯಸ್ಕರಿಗೆ ವಾರದ ದಿನಗಳಲ್ಲಿ ₹ 95, ವಾರಾಂತ್ಯದಲ್ಲಿ ₹ 118
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.