ಬೆಂಗಳೂರು: ‘ಸಿಲಿಕಾನ್ ಸಿಟಿ’ಯ ವಾಯುವಿಹಾರಿಗಳು ಮತ್ತು ಪ್ರೇಮಿಗಳ ಸ್ವರ್ಗ ಕಬ್ಬನ್ ಉದ್ಯಾನ ಈಗ ಬುಕ್ ಮೈ ಶೋನ ‘ಟರ್ಬೊ ಟಾಕ್ಸ್’ ಮತ್ತು ‘ಬ್ಲೈಂಡ್ ಡೇಟ್ಸ್’ ಎಂಬ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಾಣಿಜ್ಯ ಸ್ಥಳವಾಗಿ ಮಾರ್ಪಡುತ್ತಿದೆ. ಇದಕ್ಕೆ ಸಾರ್ವಜನಿಕರು ಹಾಗೂ ವಾಯು ವಿಹಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಬ್ಬನ್ ಉದ್ಯಾನದಲ್ಲಿ ವಾಯು ವಿಹಾರ ಮಾಡಲು ನಿತ್ಯ ಸಾವಿರಾರು ಜನ ಬರುತ್ತಾರೆ. ಅದರ ಜೊತೆಗೆ ಇಲ್ಲಿರುವ ಸಸ್ಯ ಪ್ರಭೇದಗಳು, ಜೀವವೈವಿಧ್ಯ ಹಾಗೂ ಐತಿಹಾಸಿಕ ಸ್ಥಳಗಳ ಕುರಿತು ಮಾಹಿತಿ ಪಡೆದುಕೊಳ್ಳಲು ವಿದ್ಯಾರ್ಥಿಗಳು, ಸಂಶೋಧಕರು, ಪರಿಸರ ಕಾರ್ಯಕರ್ತರು, ವಿದೇಶಿಗರು ಭೇಟಿ ನೀಡುತ್ತಾರೆ. ಇಂತಹ ಪ್ರದೇಶದಲ್ಲಿ ಈಗ ಖಾಸಗಿ ವಿಚಾರವಾಗಿರುವ ಬ್ಲೈಂಡ್ ಡೇಟಿಂಗ್, ಟರ್ಬೊ ಟಾಕ್ಸ್ ಎಂಬ ವಾಣಿಜ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬುಕ್ ಮೈ ಶೋ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ.
‘ಕಬ್ಬನ್ ಉದ್ಯಾನದಲ್ಲಿ ಟರ್ಬೊ ಟಾಕ್ಸ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆ. 3ರಿಂದ 24ರವರೆಗೆ ನೋಂದಣಿಗೆ ಅವಕಾಶವಿದ್ದು, ₹999 ದರ ನಿಗದಿಪಡಿಸಲಾಗಿದೆ. ಆಗಸ್ಟ್ ತಿಂಗಳ ಪ್ರತಿ ಭಾನುವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, 1 ಗಂಟೆ 30 ನಿಮಿಷಗಳವರೆಗೆ ಅಪರಿಚಿತ ಗೆಳೆಯ-ಗೆಳತಿಯರೊಡನೆ ಸ್ನೇಹ ಸಂಭಾಷಣೆಗೆ ಅವಕಾಶವಿದೆ. ಇದರಲ್ಲಿ 18 ವರ್ಷ ಮೇಲ್ಪಟ್ಟ ಹುಡುಗರು ಮಾತ್ರ ಭಾಗವಹಿಸಬಹುದು’ ಎಂದು ಬುಕ್ ಮೈಶೋ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ’ ಎಂದು ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ತಿಳಿಸಿದ್ದಾರೆ.
‘ಕಬ್ಬನ್ ಉದ್ಯಾನದಲ್ಲಿ ಟರ್ಬೊ ಟಾಕ್ಸ್ ಸ್ಪೀಡ್ ಡೇಟಿಂಗ್ ಎಂಬ ವಾಣಿಜ್ಯ ಕಾರ್ಯಕ್ರಮ ಆಯೋಜಿಸುತ್ತಿರುವುದು ಖಂಡನೀಯ. ಬುಕ್ ಮೈ ಶೋನಲ್ಲಿ ₹999 ದರ ನಿಗದಿಪಡಿಸಲಾಗಿದೆ. ತೋಟಗಾರಿಕೆ ಇಲಾಖೆ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದರು.
ದೂರು ದಾಖಲು’
‘ಕಬ್ಬನ್ ಉದ್ಯಾನ ಒಂದು ಸಂರಕ್ಷಿತ ಪ್ರದೇಶ. ಇಲ್ಲಿ ಡೇಟಿಂಗ್ ಟಾಕಿಂಗ್ ಸೇರಿದಂತೆ ಯಾವುದೇ ರೀತಿಯ ವಾಣಿಜ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿಷೇಧಿಸಲಾಗಿದೆ. ಕಬ್ಬನ್ ಉದ್ಯಾನದಲ್ಲಿ ಬುಕ್ ಮೈಶೋ ಆಯೋಜಿಸಿದ್ದ ಬ್ಲೈಂಡ್ ಡೇಟಿಂಗ್ ಎಂಬ ವಾಣಿಜ್ಯ ಕಾರ್ಯಕ್ರಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ಕಬ್ಬನ್ ಉದ್ಯಾನ್ (ತೋಟಗಾರಿಕೆ ಇಲಾಖೆ) ಉಪ ನಿರ್ದೇಶಕಿ ಜಿ. ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.