ADVERTISEMENT

ಉಗ್ರ ರಾಷ್ಟ್ರೀಯತೆಯಿಂದ ಸಾಂಸ್ಕೃತಿಕ ಬಿಕ್ಕಟ್ಟು: ಚಿಂತಕ ರಾಜೇಂದ್ರ ಚೆನ್ನಿ

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 16:10 IST
Last Updated 27 ನವೆಂಬರ್ 2025, 16:10 IST
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷೆಗಳ ಕೇಂದ್ರವು ಆಯೋಜಿಸಿರುವ ಭಾಷೆ, ಸಂಸ್ಕೃತಿ, ವಿಶ್ವಶಾಂತಿ–ಶಾಂತಿಯುತ ಜಗತ್ತಿಗಾಗಿ ಸಂವಾದದಲ್ಲಿ ಫ್ರಾನ್ಸ್‌ನ ತಜ್ಞ ಫ್ಯಾಡಿ ಫಡೆಲ್ ಅವರನ್ನು ಕುಲಪತಿ ಬಿ.ರಮೇಶ್‌ ಸ್ವಾಗತಿಸಿದರು. ಜ್ಯೋತಿ ವೆಂಕಟೇಶ್‌, ರಾಜೇಂದ್ರ ಚೆನ್ನಿ, ಮೈಕೆಲ್ ಹೈನ್ಸ್ಟ್ ಉಪಸ್ಥಿತರಿದ್ದರು.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷೆಗಳ ಕೇಂದ್ರವು ಆಯೋಜಿಸಿರುವ ಭಾಷೆ, ಸಂಸ್ಕೃತಿ, ವಿಶ್ವಶಾಂತಿ–ಶಾಂತಿಯುತ ಜಗತ್ತಿಗಾಗಿ ಸಂವಾದದಲ್ಲಿ ಫ್ರಾನ್ಸ್‌ನ ತಜ್ಞ ಫ್ಯಾಡಿ ಫಡೆಲ್ ಅವರನ್ನು ಕುಲಪತಿ ಬಿ.ರಮೇಶ್‌ ಸ್ವಾಗತಿಸಿದರು. ಜ್ಯೋತಿ ವೆಂಕಟೇಶ್‌, ರಾಜೇಂದ್ರ ಚೆನ್ನಿ, ಮೈಕೆಲ್ ಹೈನ್ಸ್ಟ್ ಉಪಸ್ಥಿತರಿದ್ದರು.   

ಬೆಂಗಳೂರು: ’ಉಗ್ರ ರಾಷ್ಟ್ರೀಯತೆಯ ಪ್ರತಿಪಾದನೆಯಿಂದ ಭಾರತದಲ್ಲಿ ಗಂಭೀರ ಸಾಂಸ್ಕೃತಿಕ ಬಿಕ್ಕಟ್ಟಿನ ವಾತಾವರಣ ಸೃಷ್ಟಿಯಾಗಿದ್ದು, ವಚನಕಾರರು ಹಾಗೂ ಸೂಫಿ ಸಂತರ ಸಂವಾದ ಪರಂಪರೆಯಿಂದಲೇ ಇದನ್ನು ನಿಭಾಯಿಸಬಹುದು’ ಎಂದು ಚಿಂತಕ ರಾಜೇಂದ್ರ ಚೆನ್ನಿ ಹೇಳಿದರು.

ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರವು ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ‘ಭಾಷೆ, ಸಂಸ್ಕೃತಿ, ವಿಶ್ವಶಾಂತಿ–ಶಾಂತಿಯುತ ಜಗತ್ತಿಗಾಗಿ ಸಂವಾದ’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು

‘ಪ್ರಬಲ ಸಂಸ್ಕೃತಿಯೊಂದಿಗೆ ವಿಲೀನಕ್ಕಾಗಿ ಅನ್ಯ ಸಂಸ್ಕೃತಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದೆ. ಇದರಿಂದ ಬಹುತ್ವ ತತ್ವ ಆಧರಿತ ಭಾವೈಕ್ಯತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆತಂಕದ ರೂಪ ಪಡೆದಿರುವ ಇದಕ್ಕೆ ನಮ್ಮಲ್ಲಿಯೇ ಇರುವ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಚನಕಾರರ ಮತ್ತು ಉದಾರ ಚಿಂತನೆಯ ಸೂಫಿ ಸಂತರೊಂದಿಗೆ ಸಂವಾದ ಪರಿಹಾರವಾಗಲಿದೆ’ ಎಂದು ಹೇಳಿದರು.

ADVERTISEMENT

‘ಉದಾರವಾದಿ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆ ಅಳವಡಿಸಿಕೊಂಡಿರುವ ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಆಯ್ಕೆ ಸ್ವಾತಂತ್ರ್ಯ ಎತ್ತಿ ಹಿಡಿಯಬೇಕು. ಇದರಿಂದ ಸಾಮಾಜಿಕ ಸಾಮರಸ್ಯ ಕಾಪಾಡಬಹುದು’ ಎಂದು ತಿಳಿಸಿದರು.

ಫ್ರಾನ್ಸ್‌ನ ಶಿಕ್ಷಣ ತಜ್ಞ ಫ್ಯಾಡಿ ಫಡೆಲ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಜಾಗತಿಕ ಸಂಘರ್ಷದ ಸವಾಲುಗಳಿಗೆ ಸಂಯಮ ಮತ್ತು ಶಾಂತಿಯುತ ಸಂವಾದಗಳೇ ಸರಿಯಾದ ಮಾರ್ಗಗಳು’ ಎಂದು ಸಲಹೆ ನೀಡಿದರು.

ಸೆಂಟ್ರಲ್ ಟಿಬೆಟಿಯನ್ ಆಡಳಿತದ ದಕ್ಷಿಣ ವಲಯ ಪ್ರಧಾನ ಅಧಿಕಾರಿ ಜಿಗ್ಮೆ ಟ್ಸುಲ್ಟ್ರಿಮ್, ಬೆಂಗಳೂರಿನ ಅಲಿಯನ್ಸ್ ಫ್ರಾಂಚೈಸ್ ನಿರ್ದೇಶಕ ಜೀನ್ ಮಾರ್ಕ್ ಡಿಪಿಯರ್ ಮತ್ತು ಮ್ಯಾಕ್ಸ್ ಮುಲ್ಲರ್ ಭವನದ ನಿರ್ದೇಶಕ ಮೈಕೆಲ್ ಹೈನ್ಸ್ಟ್, ಕುಲಪತಿ ಬಿ. ರಮೇಶ್, ಕುಲಸಚಿವರಾದ ಎ. ನವೀನ್ ಜೋಸೆಫ್, ರಮೇಶ್ ಬಿ.ಕುಡೇನಟ್ಟಿ, ಹಣಕಾಸು ಅಧಿಕಾರಿ ಎಂ.ವಿ.ವಿಜಯಲಕ್ಷ್ಮಿ, ಜಾಗತಿಕ ಭಾಷೆಗಳ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.