ADVERTISEMENT

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯದ ಸಂಭ್ರಮ; ದೇಶಭಕ್ತಿ ಅನಾವರಣ

ಹುತಾತ್ಮರ ಸ್ಮರಣೆ, ಮೈನವಿರೇಳಿಸಿದ ಸಾಹಸ ಪ್ರದರ್ಶನ, ಆಕರ್ಷಕ ನೃತ್ಯರೂಪಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 16:07 IST
Last Updated 15 ಆಗಸ್ಟ್ 2023, 16:07 IST
ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಬಿಎಸ್ಎಫ್ ಯೋಧರ ಪಥಸಂಚಲನ ಗಮನಸೆಳೆಯಿತು.   –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ. 
ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಬಿಎಸ್ಎಫ್ ಯೋಧರ ಪಥಸಂಚಲನ ಗಮನಸೆಳೆಯಿತು.   –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.    

ಬೆಂಗಳೂರು: ಆಕರ್ಷಕ ಪಥಸಂಚಲನ, ಗಮನಸೆಳೆದ ನೃತ್ಯರೂಪಕಗಳು, ಮೈನವಿರೇಳಿಸಿದ ಟೆಂಟ್‌ ಪೆಗ್ಗಿಂಗ್‌, ಮೋಟಾರ್‌ ಸೈಕಲ್‌ ಪ್ರದರ್ಶನ...

ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ ಮತ್ತು ಶಾಲಾ ಶಿಕ್ಷಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ವಿವಿಧ ತಂಡಗಳ ಮತ್ತು ಶಾಲಾ ಮಕ್ಕಳ ಪಥಸಂಚಲನ ಗಮನಸೆಳೆಯಿತು.

ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್‌ ಪಡೆ, ಕೆಎಸ್‌ಆರ್‌ಪಿ, ಗೋವಾ ಪೊಲೀಸ್‌ ತಂಡ, ಸಂಚಾರ ಪೊಲೀಸ್‌, ಎನ್‌ಸಿಸಿ, ಅಗ್ನಿಶಾಮಕ ದಳ, ಅಬಕಾರಿ ತಂಡ, ಶ್ವಾನದಳ, ಗೃಹರಕ್ಷಕ ದಳ ಹಾಗೂ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ , ರಾಷ್ಟ್ರೀಯ ಮಿಲಿಟರಿ ಶಾಲೆ, ಆರ್ಮಿ ಪಬ್ಲಿಕ್‌ ಶಾಲೆ, ಪೊಲೀಸ್‌ ಪಬ್ಲಿಕ್‌ ಶಾಲೆ, ಪ್ರೆಸಿಡೆನ್ಸಿ ಶಾಲೆ, ತಿಲಕ್‌ ಮೆಮೊರಿಯಲ್‌ ಶಾಲಾ ಮಕ್ಕಳು ಪಥಸಂಚಲನದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿದರು. ರಮಣ ಶ್ರೀ ಹಾಗೂ ಸಮರ್ಥನಂ ಶಾಲೆಯ ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಒಟ್ಟು 38 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು.

ADVERTISEMENT

ಪಥಸಂಚಲನದ ಗ್ರೂಪ್-1 ವಿಭಾಗದಲ್ಲಿ ಬಿಎಸ್‌ಎಫ್ ತಂಡಕ್ಕೆ ಪ್ರಥಮ ಸ್ಥಾನ ಲಭಿಸಿತು. ಸಿಆರ್‌ಪಿಎಫ್ (ಮಹಿಳಾ) ತಂಡ ದ್ವಿತೀಯ ಹಾಗೂ ಕೆಎಸ್‌ಆರ್‌ಪಿ ತಂಡವು ತೃತೀಯ ಸ್ಥಾನ ಪಡೆಯಿತು.

ವಿವಿಧ ಶಾಲಾ ತಂಡಗಳು ದೇಶಭಕ್ತಿ ಸಂದೇಶ ಸಾರುವ ನೃತ್ಯರೂಪಕಗಳನ್ನು ಪ್ರಸ್ತುತಪಡಿಸಿದವು.

ಸಾರಕ್ಕಿಯ ಕರ್ನಾಟಕ ಪಬ್ಲಿಕ್‌ ಶಾಲೆಯ 750 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ‘ವೀರ ನಮನ’ ನೃತ್ಯ ರೂಪಕ ಆಕರ್ಷಕವಾಗಿತ್ತು. ದೇಶಕ್ಕಾಗಿ ಪ್ರಾಣವನ್ನು ಮುಡುಪಾಗಿಡುವ ಯೋಧರ ತ್ಯಾಗ, ಬಲಿದಾನ ಜೀವನದ ಕುರಿತಾದ ಈ ನೃತ್ಯರೂಪಕವು ನಮ್ಮ ನಾಡು ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವುದನ್ನು ಸಹ ಬಿಂಬಿಸಿತು.

ಬೆಂಗಳೂರು ಉತ್ತರ ವಲಯದ ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳು ‘ವೀರಭೂಮಿ ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ’ ರೂಪಕವನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 50 ವಿದ್ಯಾರ್ಥಿಗಳು ‘ರೋಪ್‌ ಸ್ಕಿಪ್ಪಿಂಗ್‌’ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಲೀಲಾಜಾಲವಾಗಿ ವಿವಿಧ ರೀತಿಯ ಸ್ಕಿಪ್ಪಿಂಗ್‌ ಪ್ರದರ್ಶನ ರೋಮಾಂಚನಕಾರಿಯಾಗಿತ್ತು.

ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಆ್ಯಂಡ್‌ ಸೆಂಟರ್‌ನ ’ಕಲಾರಿಪಯಟ್ಟು’ ಮತ್ತು ಎಎಸ್‌ಸಿ ಕೇಂದ್ರದ ಟೆಂಟ್‌ ಪೆಗ್ಗಿಂಗ್‌ ಹಾಗೂ ಮೋಟಾರ್‌ ಸೈಕಲ್‌ ಸಾಹಸ ಪ್ರದರ್ಶನ ಮೈನವಿರೇಳಿಸಿತು.

ಎಎಸ್‌ಸಿ ಮತ್ತು ಕೇಂದ್ರದ ಯೋಧರು
ಎಎಸ್‌ಸಿ ಮತ್ತು ಕೇಂದ್ರದ ಯೋಧರು
ಎಎಸ್‌ಸಿ ಮತ್ತು ಕೇಂದ್ರದ ಯೋಧರು
ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು
ಎಎಸ್‌ಸಿ ಮತ್ತು ಕೇಂದ್ರದ ಯೋಧರು
ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳು ರೋಪ್ ಸ್ಕಿಪ್ಪಿಂಗ್ ಪ್ರದರ್ಶಿಸಿದರು.  –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.